ದುಬಾರಿ, ದುರಂತ ವಿವಾಹಗಳು

Update: 2021-03-01 12:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಎ.ಎಚ್. ಪುತ್ತಿಗೆ ಅವರ ವಿಶೇಷ ಲೇಖನವನ್ನು ಆಲಿಸಿರಿ

Full View

ವಿವಾಹದಲ್ಲಿ ನಿಜವಾಗಿ ಮುಖ್ಯವಾಗಿರಬೇಕಾದುದು ವಧು-ವರರ ಭಾವೀ ಜೀವನದ ಸುಖ ಸಂತೋಷ. ಅದಕ್ಕಾಗಿ ಅವರಿಬ್ಬರೂ ಒಂದಷ್ಟು ಮಾನಸಿಕ ತಯಾರಿ ಮಾಡಿಕೊಳ್ಳಬೇಕು, ಪರಸ್ಪರರನ್ನು, ಪರಸ್ಪರರ ಆಪ್ತರನ್ನು ಹಾಗೂ ಕುಟುಂಬಗಳನ್ನು ಅರಿಯಲು, ಅರ್ಥ ಮಾಡಿಕೊಳ್ಳಲು ಶ್ರಮಿಸಬೇಕು. ಕುಟುಂಬ ಅಂದರೇನು? ಅತ್ತೆ, ಮಾವ, ಮೈದುನ, ನಾದಿನಿ ಎಂಬ ಹೊಸ ಬಂಧುಗಳ ಮಹತ್ವವೇನು? ಅವರ ನಿರೀಕ್ಷೆಗಳೇನು? ಒಂದು ಸಂಯುಕ್ತ ಕುಟುಂಬದಲ್ಲಿ ವಿವಿಧ ಸಂಬಂಧಗಳನ್ನು ಘನತೆಯೊಂದಿಗೆ, ಆರೋಗ್ಯಕರವಾಗಿ ಹೇಗೆ ಉಳಿಸಿಕೊಳ್ಳಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ಅವರು ಒಂದಷ್ಟು ತಿಳುವಳಿಕೆ ಬೆಳೆಸಿಕೊಳ್ಳಬೇಕು.



ಒಂದು ವಿವಾಹಕ್ಕೆ ಒಟ್ಟು ಎಷ್ಟು ಖರ್ಚಾಗಬಹುದು?
ಈ ಪ್ರಶ್ನೆಗೆ ನಿರ್ದಿಷ್ಟ ಉತ್ತರವೇನಿಲ್ಲ. ಕೆಲವು ಸಾವಿರ ರೂಪಾಯಿಗಳಿಂದ ಆರಂಭವಾಗಿ ಹಲವು ಕೋಟಿ ರೂಪಾಯಿಗಳವರೆಗೂ ವಿವಾಹದ ಬಜೆಟ್ ವಿಸ್ತರಿಸುವುದುಂಟು.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ನಮ್ಮ ಸ್ನೇಹಿತರೊಬ್ಬರ ಮಗನ ವಿವಾಹದ ವೇಳೆ ಹಲವು ಗಂಟೆಗಳ ಕಾಲ ಭಾರೀ ಪ್ರಮಾಣದ ರಂಗುರಂಗಿನ ಪಟಾಕಿ ಪ್ರದರ್ಶನ ನಡೆದಿತ್ತು. ಆ ಸ್ನೇಹಿತರೊಡನೆ ಆ ಕುರಿತು ವಿಚಾರಿಸಿದ್ದೆ. ಅದಕ್ಕವರು, ನನ್ನ ಭಾವ ಒಂದೂವರೆ ಕೋಟಿ ರೂಪಾಯಿಯ ಕಾಂಟ್ರಾಕ್ಟ್ ಕೊಡುವುದರಲ್ಲಿದ್ದರು. ಆದರೆ ನಾನು ಬಹಳಷ್ಟು ಚೌಕಾಶಿ ಮಾಡಿ ಕೊನೆಗೆ ಪಟಾಕಿ ಬಜೆಟ್‌ನ್ನು 80 ಲಕ್ಷಕ್ಕೆ ಸೀಮಿತಗೊಳಿಸಿದೆ ಎಂದಿದ್ದರು. ಕೇವಲ ಪಟಾಕಿಯ ಬಜೆಟ್ ಇಷ್ಟಿದ್ದರೆ ಆ ವಿವಾಹದ ಒಟ್ಟು ಬಜೆಟ್ ಎಷ್ಟಿರಬಹುದು? ಅವರು ರಾಜಮನೆತನದವರೇನೂ ಅಲ್ಲ. ಮೇಲ್ಮಧ್ಯಮ ವರ್ಗದ ಒಬ್ಬ ನವ ಶ್ರೀಮಂತ. ಪ್ರಸ್ತುತ ವಿವಾಹ ನಡೆದ ಮೈದಾನದ ತೀರಾ ಹತ್ತಿರವೇ, ಒಪ್ಪೊತ್ತಿನ ಅನ್ನಕ್ಕೆ ಗತಿ ಇಲ್ಲದೆ ಹಸಿವಿನಿಂದ ನರಳುತ್ತಿರುವ ಸಾವಿರಾರು ಮಂದಿ ಬದುಕುತ್ತಿದ್ದಾರೆ. ಕೇವಲ ಕೆಲವು ನೂರು ರೂಪಾಯಿಗಳ ಶೈಕ್ಷಣಿಕ ವೆಚ್ಚ ಭರಿಸಲಾಗದೆ ಶಿಕ್ಷಣ ಮೊಟಕುಗೊಳಿಸಿದ ಸಾವಿರಾರು ಮಕ್ಕಳಿದ್ದಾರೆ. ಎಷ್ಟೋ ಎಳೆಯ ಮಕ್ಕಳು ಕಡು ದಾರಿದ್ರದಿಂದಾಗಿ ಭಿಕ್ಷಾಟನೆಗೆ ಅಥವಾ ಬಾಲಕಾರ್ಮಿಕರಾಗುವುದಕ್ಕೆ ನಿರ್ಬಂಧಿತರಾಗಿದ್ದಾರೆ. ವಿವಿಧ ರೋಗಗಳಿಂದ ಬಳಲುತ್ತಿರುವ ಎಷ್ಟೋ ಸಾವಿರ ಮಂದಿ ಅಲ್ಲೇ ಪಕ್ಕದಲ್ಲಿ ಚಿಕಿತ್ಸೆಗೆ ದುಡ್ಡಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಎಷ್ಟೋ ಮಕ್ಕಳ ಕಣ್ಮುಂದೆ ಅವರ ಹೆತ್ತವರು ಮತ್ತು ಎಷ್ಟೋ ಹೆತ್ತವರ ಕಣ್ಮುಂದೆ ಅವರ ಪ್ರೀತಿಯ, ಮುಗ್ಧ ಮಕ್ಕಳು ಅನ್ನಕ್ಕೆ, ಔಷಧಿಗೆ ದುಡ್ಡಿಲ್ಲದೆ ಸಾಯುತ್ತಿದ್ದಾರೆ. ಎಷ್ಟೋ ಹೆಣ್ಮಕ್ಕಳು ಬದುಕಿನ ತಮ್ಮ ಹಸಿವು ತಣಿಸಲು ಬೇರೆ ದಾರಿ ಕಾಣದೆ, ನಮ್ಮ ಮಡಿವಂತರು ‘ಅನೈತಿಕ’ ಎಂದು ಕರೆಯುವ ರಂಗಕ್ಕೆ ತಳ್ಳಲ್ಪಡುತ್ತಾರೆ. ಈ ಎಲ್ಲ ದಾರುಣ ನರಳಾಟಗಳಿಂದ ಸುತ್ತುವರಿಯಲ್ಪಟ್ಟವರು ಅವುಗಳನ್ನೆಲ್ಲ ಕಣ್ಣಾರೆ ಕಾಣುತ್ತಲೇ, ಹಲವು ಸಾವಿರಮಂದಿಗೆ ಅನ್ನ, ಔಷಧಿ ಮತ್ತು ಸಾಕ್ಷಾತ್ ಜೀವ ಒದಗಿಸಬಹುದಾಗಿದ್ದ ಕೋಟಿಗಟ್ಟಲೆ ರೂಪಾಯಿಗಳನ್ನು ಕುರುಡಾಗಿ ಕೇವಲ ಬೂಟಾಟಿಕೆಗಾಗಿ ದುಂದುವೆಚ್ಚದಲ್ಲಿ ಬೂದಿ ಮಾಡಿ ನಡೆಸುವ ವಿವಾಹವನ್ನು ಏನೆಂದು ಕರೆಯಬೇಕು? ಅಂತಹ ವಿವಾಹವು ಶುಭ ವಿವಾಹವಾಗಲು ಸಾಧ್ಯವೇ?

ನಮ್ಮ ಸಮಾಜದಲ್ಲಿಂದು ಸರಳವಿವಾಹ ಎಂದೊಡನೆ ಕಣ್ಣ ಮುಂದೆ ಬರುವುದು ಕಡು ಬಡವರು ಹಾಗೂ ನಿರ್ಗತಿಕರ ವಿವಾಹ ಮಾತ್ರ. ಉಳಿದಂತೆ, ಸಾಮಾನ್ಯ ಕೆಳ ಮಧ್ಯಮ ವರ್ಗದವರು ಕೂಡಾ ಸಾಲಸೋಲ ಮಾಡಿ, ಇದ್ದದ್ದನ್ನು ಮಾರಿ ಅಥವಾ ಅಡವಿಟ್ಟು ಎರಡು ಮೂರು ಲಕ್ಷ ರೂಪಾಯಿಗಳನ್ನಾದರೂ ಖರ್ಚು ಮಾಡುತ್ತಾರೆ. ಅತ್ತ, ಹತ್ತಾರು ಲಕ್ಷಗಳನ್ನು ವಿವಾಹ ಸಮಾರಂಭಕ್ಕೆ ಬಲಿ ನೀಡಿ ತಾವು ಶ್ರೀಮಂತರೆಂದು ಸಮಾಜಕ್ಕೆ ಮನವರಿಕೆ ಮಾಡಿಸಲು ಹೊರಡುವ ಎಲ್ಲರೂ ನಿಜವಾದ ಶ್ರೀಮಂತರೇನೂ ಆಗಿರುವುದಿಲ್ಲ. ಗಮ್ಮತ್ತೇನೆಂದರೆ ಅವರು ಈ ರೀತಿ ಶ್ರೀಮಂತಿಕೆ ಮೊೆಯಲು ಪಟ್ಟಿರುವ ಪಾಡು, ಅಷ್ಟು ಖರ್ಚುಮಾಡಲು ಅವರು ಮಾಡಿರುವ ಸಾಲಗಳು, ಅವರು ಅಡವಿಟ್ಟ ಸೊತ್ತುಗಳು, ಅವರು ಪಾವತಿಸಿರುವ ಬಡ್ಡಿ, ಅವರು ಬಾಕಿ ಇಟ್ಟಿರುವ ಬಿಲ್ಲುಗಳು, ಅವರು ಮಾಡಿರುವ ವಂಚನೆಗಳು, ವಚನ ಭಂಗಗಳು ಇವೆಲ್ಲಾ ಅವರ ಸುತ್ತ ಮುತ್ತಲಿನ ಜನರಿಗೆ, ಅವರ ಅದ್ದೂರಿಯ ವಿವಾಹದಲ್ಲಿ ತಿಂದು, ತೇಗಿ, ಮದುಮಗನ ಕೈ ಕುಲುಕಿ ಬರುವವರಿಗೆಲ್ಲ ಚೆನ್ನಾಗಿ ತಿಳಿದಿರುತ್ತದೆ. ಅಷ್ಟೆಲ್ಲಾ ಕಷ್ಟಪಟ್ಟು ಇಷ್ಟೊಂದು ಅಬ್ಬರದ ವಿವಾಹ ಏರ್ಪಡಿಸುವ ಅಗತ್ಯವಿರಲಿಲ್ಲ ಎಂದು ಅವರಲ್ಲಿ ಹಲವರು ಜೋರಾಗಿಯೇ ಮಾತನಾಡಿಕೊಳ್ಳುತ್ತಿರುತ್ತಾರೆ. ಉಳಿದವರು ಪಿಸುಮಾತಿನಲ್ಲೇ ಈ ತಮ್ಮ ತರ್ಕವನ್ನು ಆತ್ಮೀಯರ ಜೊತೆ ಹಂಚಿಕೊಂಡು ಸುಮ್ಮನಿರುತ್ತಾರೆ. ಹೀಗೆ, ತಾವು ಶ್ರೀಮಂತರೆಂದು ತಮ್ಮ ಪರಿಚಯಸ್ಥರನ್ನು ನಂಬಿಸುವ ತಮ್ಮ ಮೂಲ ಶ್ರಮದಲ್ಲೂ ಹೆಚ್ಚಿನವರು ಘೋರ ಸೋಲನ್ನು ಕಾಣುತ್ತಾರೆ.

 ಶ್ರೀಮಂತಿಕೆ ಮೆರೆಯುವ ಅಥವಾ ಹಾಗೆ ನಟಿಸುವವರ ವಿವಾಹಗಳು ದೊಡ್ಡ ಹಾಲ್‌ನಲ್ಲಿ, ದುಬಾರಿ ಹೊಟೇಲ್‌ನಲ್ಲಿ ಅಥವಾ ರೆಸಾರ್ಟ್‌ನಲ್ಲಿ ನಡೆಯುತ್ತವೆ. ಹೊರಗಿನಿಂದ ಬರುವ ಅತಿಥಿಗಳಿಗಾಗಿ ಪಂಚತಾರಾ ಹೊಟೇಲುಗಳಲ್ಲಿ ಒಂದಷ್ಟು ಕೊಠಡಿಗಳನ್ನು ಬುಕ್ ಮಾಡಿರುತ್ತಾರೆ. ಸಂಪತ್ ಸಹಜ ಅನಾರೋಗ್ಯಗಳಿಂದ ಬಳಲುವ ಮತ್ತು ಪಥ್ಯಗಳ ಉದ್ದದ ಪಟ್ಟಿಯನ್ನೇ ಹೊತ್ತು ನಡೆಯುವ ಶ್ರೀಮಂತ ಅತಿಥಿಗಳ ಹೊಟ್ಟೆ ತುಂಬಲು ದುಬಾರಿ ಕೇಟರಿಂಗ್ ಕಂಪೆನಿಯವರಿಗೆ ಊಟೋಪಚಾರದ ಕಾಂಟ್ರಾಕ್ಟ್ ಕೊಟ್ಟಿರುತ್ತಾರೆ. ವೇದಿಕೆಯನ್ನು ಅಲಂಕರಿಸಲಿಕ್ಕಾಗಿ, ಡೆಕೋರೇಷನ್ ಲೈಟ್‌ಗಳಿಗಾಗಿ, ಮದುಮಗನನ್ನು/ಳನ್ನು ಯಕ್ಷಗಾನ ಪಾತ್ರಧಾರಿಯಾಗಿ ಪರಿವರ್ತಿಸುವ ಬ್ಯುಟಿಶನ್ ಕಲಾವಿದರಿಗಾಗಿ ಮತ್ತು ಫೋಟೊ ಹಾಗೂ ವೀಡಿಯೊ ಶೂಟಿಂಗ್‌ಗಾಗಿ ಲಕ್ಷಗಟ್ಟಲೆ ವ್ಯಯಿಸುತ್ತಾರೆ. ದುಬಾರಿ ವಾಚು, ಆಭರಣಗಳನ್ನು ಖರೀದಿಸಿ ಪ್ರದರ್ಶಿಸುತ್ತಾರೆ. ವಿವಾಹಕ್ಕೆಂದೇ ಕೆಲವು ದುಬಾರಿ ಕಾರುಗಳನ್ನು ತಂದು ಮದುವೆ ಹಾಲ್ ಮುಂದೆ ಪ್ರದರ್ಶನಕ್ಕಿಡುತ್ತಾರೆ. ವಿವಾಹದ ಬಳಿಕ ಮತ್ತೆಂದೂ ಉಪಯೋಗಕ್ಕೆ ಬಾರದ ಡಿಸೈನರ್ ಗೌನ್, ಕೋಟು ಸೂಟು ಬೂಟು ಇತ್ಯಾದಿಗಳಿಗಾಗಿ ಕೆಲವು ಲಕ್ಷ ರೂಪಾಯಿಗಳು ಪೋಲಾಗುತ್ತವೆ. ಮುಖ್ಯ ವಿವಾಹ ಸಮಾರಂಭದ ಮೊದಲೂ ಆನಂತರವೂ ಹೊಸ ಹೊಸ ಹೆಸರಿನ, ಹಲವಾರು ಉಪಸಮಾರಂಭಗಳನ್ನು ಏರ್ಪಡಿಸಿ ದುಡ್ಡು ಪೋಲು ಮಾಡಲಾಗುತ್ತದೆ. ಇಷ್ಟೆಲ್ಲಾ ಮಾಡಿದವರು ಕೊನೆಗೂ ಗಳಿಸುವುದೇನನ್ನು? ಅವರು ಮಾಡಿದ ಖರ್ಚನ್ನು ಎಷ್ಟು ಮಂದಿ ಹೊಗಳುತ್ತಾರೆ? ಎಷ್ಟು ಮಂದಿ ನೆನಪಿಡುತ್ತಾರೆ? ಎಷ್ಟು ಮಂದಿ ಅವರನ್ನು ಭಾರೀ ಶ್ರೀಮಂತರೆಂದು ಅಂಗೀಕರಿಸುತ್ತಾರೆ? ಇನ್ನು ಒಂದು ವೇಳೆ ಅಂತಹ ಅಂಗೀಕಾರ ಸಿಕ್ಕರೂ ಅದರಿಂದ ಅವರಿಗೆ ಆಗುವ ಲಾಭವಾದರೂ ಏನು?

ನಿಜವಾಗಿ, ಸೀಮಿತ ವೆಚ್ಚದ ಸರಳ ವಿವಾಹ ಮಾಡಿ, ಅದರಿಂದ ಉಳಿತಾಯವಾಗುವ ದೊಡ್ಡ ಮೊತ್ತವನ್ನು ಬಡಬಗ್ಗರಿಗೆ ದಾನ ಮಾಡಿದ ಹೃದಯವಂತ, ಸಂವೇದನಾಶೀಲ ಶ್ರೀಮಂತರನ್ನು ಜನ ಹೊಗಳುತ್ತಾರೆ. ದುಬಾರಿ ಪ್ರಿಯರು ಎಷ್ಟು ಕೋಟಿ ಪುಡಿ ಮಾಡಿದರೂ ಬೆನ್ನ ಹಿಂದೆ ಒಂದಷ್ಟು ಮೂದಲಿಕೆಗೆ ಪಾತ್ರರಾಗುತ್ತಾರೆಯೇ ಹೊರತು ಯಾರೂ ಅವರನ್ನು ಪ್ರಶಂಸಿಸುವುದಿಲ್ಲ. ಒಬ್ಬ ನವಸಿರಿವಂತ ನಾನು ನನ್ನ ಮಗನ/ಳ ವಿವಾಹಕ್ಕೆ ಐವತ್ತು ಕೋಟಿ ಖರ್ಚು ಮಾಡಿದ್ದೇನೆ ಎಂದು ಬೊಗಳೆ ಹೊಡೆದರೆ ಪಕ್ಕದವರೇನೂ ಇಂಪ್ರೆಸ್ ಆಗುವುದಿಲ್ಲ. ಅವರು ಇನ್ನೊಬ್ಬ ಮೂರ್ಖ ಶ್ರೀಮಂತನ ಹೆಸರು ಹೇಳಿ, ಅವರು ತಮ್ಮ ಮಗನ/ಳ ವಿವಾಹಕ್ಕೆ ನೂರು ಕೋಟಿ ಖರ್ಚು ಮಾಡಿದ್ದರು ಎಂದು ಎಲ್ಲರಿಗೂ ನೆನಪಿಸುತ್ತಾರೆ. ಆಗ ಪ್ರಸ್ತುತ ಬೊಗಳೆಕೋರನಿಗೆ ಹಠಾತ್ತನೆ ತಾನು ಕುಬ್ಜನಾಗಿದ್ದೇನೆ ಎಂದು ಅನಿಸತೊಡಗುತ್ತದೆ. ಅವನು ಈ ವೇಳೆ ತಾನು ಕೇವಲ ಅರ್ಧ ಮೂರ್ಖ ಎಂದು ಒಪ್ಪಿಕೊಂಡು ಸುಮ್ಮನಾದರೆ ಮಾತ್ರ ಬಚಾವಾಗುತ್ತಾನೆ. ಅನ್ಯಥಾ ಮುಂದಿನ ವಿವಾಹದಲ್ಲಿ ನೂರು ಕೋಟಿ ವ್ಯಯಿಸಿ ಪೂರ್ಣ ಮೂರ್ಖನೆನಿಸಿಕೊಳ್ಳುತ್ತಾನೆ.

ಈ ಬಗೆಯ ಅಕ್ಷಮ್ಯ ದುಂದು ವ್ಯಯದ ವಿವಾಹದಿಂದ ಕನಿಷ್ಠ ವಧು- ವರರಿಗಾದರೂ ಏನಾದರೂ ಪ್ರಯೋಜನವಾಗುತ್ತದೆಯೇ? ಈ ರೀತಿ ನಡೆದ ಎಷ್ಟೋ ವಿವಾಹಗಳು ಕೇವಲ ಕೆಲವು ತಿಂಗಳಲ್ಲೇ ಮುರಿದು ಬಿದ್ದ ಎಷ್ಟೋ ಉದಾಹರಣೆಗಳಿವೆ. ವಿವಾಹದಲ್ಲಿ ನಿಜವಾಗಿ ಮುಖ್ಯವಾಗಿರಬೇಕಾದುದು ವಧು- ವರರ ಭಾವೀ ಜೀವನದ ಸುಖ ಸಂತೋಷ. ಅದಕ್ಕಾಗಿ ಅವರಿಬ್ಬರೂ ಒಂದಷ್ಟು ಮಾನಸಿಕ ತಯಾರಿ ಮಾಡಿಕೊಳ್ಳಬೇಕು, ಪರಸ್ಪರರನ್ನು, ಪರಸ್ಪರರ ಆಪ್ತರನ್ನು ಹಾಗೂ ಕುಟುಂಬಗಳನ್ನು ಅರಿಯಲು, ಅರ್ಥ ಮಾಡಿಕೊಳ್ಳಲು ಶ್ರಮಿಸಬೇಕು. ಕುಟುಂಬ ಅಂದರೇನು? ಅತ್ತೆ, ಮಾವ, ಮೈದುನ, ನಾದಿನಿ ಎಂಬ ಹೊಸ ಬಂಧುಗಳ ಮಹತ್ವವೇನು? ಅವರ ನಿರೀಕ್ಷೆಗಳೇನು? ಒಂದು ಸಂಯುಕ್ತ ಕುಟುಂಬದಲ್ಲಿ ವಿವಿಧ ಸಂಬಂಧಗಳನ್ನು ಘನತೆಯೊಂದಿಗೆ, ಆರೋಗ್ಯಕರವಾಗಿ ಹೇಗೆ ಉಳಿಸಿಕೊಳ್ಳಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ಅವರು ಒಂದಷ್ಟು ತಿಳುವಳಿಕೆ ಬೆಳೆಸಿಕೊಳ್ಳಬೇಕು. ಹಿರಿಯರಿಂದ, ಅನುಭವಸ್ಥರಿಂದ ಒಂದಷ್ಟು ಸಲಹೆ, ಮಾರ್ಗದರ್ಶನ ಪಡೆಯಬೇಕು. ಆದರೆ ವಿವಾಹದ ಮಾತುಕತೆ ಆರಂಭವಾಗಿ ವಿವಾಹ ಮುಗಿಯುವ ತನಕವೂ ವಧು - ವರರು, ಅವರ ಹೆತ್ತವರು, ಕುಟುಂಬಸ್ಥರು ಇವರೆಲ್ಲರ ಗಮನ ಕೇವಲ ಹಾಲ್, ಕಾರು, ಕೇಟರಿಂಗ್, ಉಡುಗೆ ತೊಡುಗೆ, ಅಲಂಕಾರ, ಶೃಂಗಾರ, ಶೂಟಿಂಗ್, ಆಲ್ಬಮ್, ಹೊಟೇಲ್, ಹನಿಮೂನ್ ಇತ್ಯಾದಿಗಳಲ್ಲೇ ಕೇಂದ್ರಿತವಾಗಿದ್ದರೆ ಇದಕ್ಕೆಲ್ಲ ಪುರುಸೊತ್ತು ಎಲ್ಲಿ ಉಳಿದಿರುತ್ತದೆ? ಸಮಯ, ಗಮನವೆಲ್ಲ ಊರವರನ್ನು ಇಂಪ್ರೆಸ್ ಮಾಡುವುದರಲ್ಲೇ ವ್ಯರ್ಥವಾಗಿರುತ್ತದೆ.

ಹೀಗಾದಾಗ, ಹನಿಮೂನ್ ಮುಗಿದು ಒಂದೆರಡು ವಾರದೊಳಗೆ ಅನಾವರಣಗೊಳ್ಳುವ ಬದುಕಿನ ಕರಾಳ ವಾಸ್ತವಗಳನ್ನು ಎದುರಿಸಲು ವಧು-ವರರು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ. ಜಾಹೀರಾತುಗಳಲ್ಲಿ ಮತ್ತು ರೊಮ್ಯಾಂಟಿಕ್ ಸಿನೆಮಾಗಳಲ್ಲಿ ಕಾಣುವ ಭ್ರಮೆಗಳ ಜಗತ್ತನ್ನೇ ವಾಸ್ತವವೆಂದು ನಂಬಿರುವ ಯುವ ಜೋಡಿಗೆ ಅದರ ಆಚಿನ ನೈಜ ಪ್ರಪಂಚ ಅಪರಿಚಿತವಾಗಿರುತ್ತದೆ. ನಿಜಜೀವನದ ಪ್ರತಿಯೊಂದು ವಾಸ್ತವವೂ ಅವರಿಗೆ ಆಘಾತವನ್ನುಂಟು ಮಾಡುತ್ತದೆ. ವಧು-ವರರು ಬಹುಕಾಲ ವಧು-ವರರಾಗಿ ಉಳಿದಿರುವುದಿಲ್ಲ. ಅವರು ಬೇಗನೇ ಪತಿ- ಪತ್ನಿಯರಾಗಿ ಬಿಡುತ್ತಾರೆ. ಅವರು ಅಳಿಯ, ಸೊಸೆ, ಬಾವ, ಅತ್ತಿಗೆ ಇತ್ಯಾದಿಗಳಾಗಿ ಮಾರ್ಪಡುತ್ತಾರೆ. ಅವರು ಸ್ವತಃ ಒಂದು ಸಂಸಾರವಾಗುತ್ತಾರೆ ಮತ್ತು ಒಂದು ದೊಡ್ಡ ಸಂಸಾರದ ಭಾಗವಾಗುತ್ತಾರೆ. ವಧು-ವರರು ಪರಸ್ಪರರನ್ನು ನೋಡಿದ್ದಕ್ಕಿಂತ ಹೆಚ್ಚು ಸೂಕ್ಷ್ಮವಾಗಿ ಅಕ್ಕಪಕ್ಕದವರು ಅವರಿಬ್ಬರನ್ನೂ ನೋಡತೊಡಗುತ್ತಾರೆ.

ಪೂರ್ವ ಸಿದ್ಧತೆ ಇಲ್ಲದಿದ್ದರೆ ಈ ಹೊಸ ಪಾತ್ರಗಳನ್ನು ನಿಭಾಯಿಸುವುದು ಒಂದು ಕಠಿಣ ಸವಾಲಾಗಿ ಬಿಡುತ್ತದೆ. ಹೊಸ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗದಿದ್ದರೆ ತಮ್ಮ ನಿಕಟ ಬಂಧುಗಳ ಜೊತೆಗಿನ ಅವರ ಸಂಬಂಧಗಳಲ್ಲಿ ಬಿರುಕು ಮೂಡತೊಡಗುತ್ತದೆ. ಮಾತ್ರವಲ್ಲ, ಅವರ ಪರಸ್ಪರ ಸಂಬಂಧಗಳಲ್ಲೂ ಬಿರುಕುಗಳು ತಲೆದೋರುತ್ತವೆ. ಸಕಾಲದಲ್ಲಿ ಸರಿಪಡಿಸದೆ ಇದ್ದರೆ ಈ ಸಣ್ಣ ಬಿರುಕುಗಳೇ ಕ್ರಮೇಣ ಸಂಬಂಧಗಳು ಸಂಪೂರ್ಣವಾಗಿ ಕುಸಿದು ಬೀಳುವುದಕ್ಕೆ ಕಾರಣವಾಗುತ್ತವೆ. ಲೇಖನದ ಆರಂಭದಲ್ಲಿ ನಾನು ಪ್ರಸ್ತಾಪಿಸಿದ ನನ್ನ ಪಟಾಕಿ ಮಿತ್ರನ ಮಗನ ವಿವಾಹದಲ್ಲೂ ನಾನು ಶುಭ ಹಾರೈಸಿ ಬಂದಿದ್ದೆ. ಆದರೆ ಒಂದೆರಡು ತಿಂಗಳಲ್ಲೇ, ಆ ವಿವಾಹವು ದುರಂತದಲ್ಲಿ ಕೊನೆಗೊಂಡಿತೆಂಬ ವಾರ್ತೆ ಬಂದಿತ್ತು. ನಮ್ಮ ಸಮಾಜದ ಹೆಚ್ಚಿನೆಲ್ಲ ಪರಿವಾರಗಳು ಈ ಬಗೆಯ ದುರಂತಗಳನ್ನು ತಮ್ಮ ಸುತ್ತ ಮುತ್ತ ಹಲವು ಬಾರಿ ಕಂಡಿರುತ್ತವೆ ಅಥವಾ ಸ್ವತಃ ಅನುಭವಿಸಿರುತ್ತವೆ. ತಮ್ಮ ಅಕ್ಕಪಕ್ಕದವರು ಅಥವಾ ತಮ್ಮದೇ ಪರಿವಾರದ ಇತರರು ಅನುಭವಿಸಿದ ದುರಂತಗಳಿಂದ ಪಾಠ ಕಲಿತವರು ಸುರಕ್ಷಿತರಾಗಿರುತ್ತಾರೆ. ಊರವರನ್ನು ಇಂಪ್ರೆಸ್ ಮಾಡುವ ಹುಚ್ಚು ಆವೇಶದಲ್ಲಿ, ಏನನ್ನೂ ಕಲಿಯಲು ಪುರುಸೊತ್ತು ಮಾಡಿಕೊಳ್ಳಲಾಗದವರು ಅಥವಾ ಆ ಕುರಿತು ಆಸಕ್ತಿ ತೋರದವರು ಸ್ವತಃ ತಮ್ಮ ಹಾಗೂ ತಮ್ಮ ಮಕ್ಕಳ ಬದುಕನ್ನೇ ದುರಂತಗಳ ಪ್ರಯೋಗಾಲಯವಾಗಿ ಮಾರ್ಪಡಿಸಿಕೊಳ್ಳುತ್ತಾರೆ.

ಅದ್ದೂರಿ ವಿವಾಹಗಳ ಕುರಿತು ಚರ್ಚೆಯಾದಾಗಲೆಲ್ಲ ಕೆಲವರು ಅಂತಹ ವಿವಾಹಗಳನ್ನು ಬಹಿಷ್ಕರಿಸಬೇಕು ಎನ್ನುತ್ತಾರೆ. ಬಹಿಷ್ಕಾರದಿಂದ ಯಾವುದಾದರೂ ಸಮಸ್ಯೆ ಬಗೆಹರಿಯುವುದಾಗಿದ್ದರೆ, ಹಲವು ವರ್ಷಗಳ ಕಾಲ, ವರದಕ್ಷಿಣೆ ಪಡೆಯುವವರ ವಿವಾಹಗಳನ್ನು ಬಹಿಷ್ಕರಿಸಿದ್ದವರಿಗೆ ಯಶಸ್ಸು ಸಿಗಬೇಕಿತ್ತು. ಆದರೆ ಇಂದು ವರದಕ್ಷಿಣೆ ಹಲವು ನಾಜೂಕಾದ ರೂಪಗಳಲ್ಲಿ ಗೌರವ ಪಡೆದು ಮೊೆಯುತ್ತಿದೆ. ವರನಿಗೆ ‘ಗಿಫ್ಟ್’ ಕೊಡಲಾದ ಕಾರನ್ನು, ಆಭರಣಗಳನ್ನು ಅಲಂಕರಿಸಿ ಪ್ರದರ್ಶನಕ್ಕಿಡಲಾಗುತ್ತಿದೆ. ಇಂತಿಷ್ಟು ಸೊತ್ತನ್ನು ವಧುವಿನ ತಂದೆ ತನ್ನ ಅಳಿಯನಿಗೆ ಗಿಫ್ಟ್ ಮಾಡಿದ್ದಾನೆ ಎಂಬ ಸುದ್ದಿ ಯೋಜಿತ ರೂಪದಲ್ಲಿ ಲೀಕ್ ಆಗಿರುತ್ತದೆ. ಕೆಲವರ ಬಹಿಷ್ಕಾರದಿಂದ ಈ ಹೊಲಸು ಕಟ್ಟಳೆಗೆ ಯಾವ ಕುಂದೂ ಬಂದಿಲ್ಲ. ಅದ್ದೂರಿ ವಿವಾಹಗಳ ಕಥೆಯೂ ಅಷ್ಟೇ. ಇದು ಉಪದೇಶ, ಬಹಿಷ್ಕಾರಗಳಿಂದ ಬಗೆಹರಿಯುವ ಸಮಸ್ಯೆಯಲ್ಲ. ತಮ್ಮ ಶ್ರೀಮಂತಿಕೆಗೆ ಸಮಾಜದ ಮನ್ನಣೆಯ ಅಗತ್ಯವಿಲ್ಲದ ನೈಜ ಶ್ರೀಮಂತರು ತಮ್ಮ ಕುಟುಂಬಗಳಲ್ಲಿ ಸರಳವಿವಾಹಗಳನ್ನು ನಡೆಸಿದರೆ ನವ ಅಥವಾ ನಕಲಿ ಶ್ರೀಮಂತರಿಗೆ ಪಾಠವಾಗಬಹುದು. ಹಾಗೆಯೇ, ಹಸಿವು ಪೀಡಿತರ ಸಮಾಜದಲ್ಲಿ ಅದ್ದೂರಿ ವಿವಾಹಕ್ಕಾಗಿ ಹಣ ಪೋಲು ಮಾಡುವ ಸಂವೇದನಾಹೀನ ಮೂರ್ಖ ವಿದೂಷಕರನ್ನು ಬಹಿರಂಗವಾಗಿ, ಪದೇ ಪದೇ ಲೇವಡಿ ಮಾಡುವ ಮೂಲಕವೂ ಅವರಲ್ಲಿ ಒಂದಿಷ್ಟು ಲಜ್ಜೆ ಮೂಡಿಸಲು ಪ್ರಯತ್ನಿಸಬಹುದು.

Writer - ಎ.ಎಚ್. ಪುತ್ತಿಗೆ

contributor

Editor - ಎ.ಎಚ್. ಪುತ್ತಿಗೆ

contributor

Similar News