ಪೊಲೀಸ್ ಇಲಾಖೆಗೆ ಚೆಕ್ ಹಸ್ತಾಂತರಿಸಿದ ಆಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿ
ಬೆಂಗಳೂರು, ಫೆ.28: ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿರುವ ಹಾಗೂ ಶಾಶ್ವತ ಅಂಗವಿಕಲತೆಗೆ ಗುರಿಯಾಗಿರುವ ಪೊಲೀಸ್ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಆಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿಯು ಚೆಕ್ ಅನ್ನು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿತು.
ಶನಿವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ 1.5 ಕೋಟಿ ರೂ. ಗಳ ವಿಮೆ ಹಣವನ್ನು ನೀಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಆಕ್ಸಿಸ್ ಬ್ಯಾಂಕಿನ ರಾಜ್ಯ ಉಪಾಧ್ಯಕ್ಷ ಕಿರಣ್, ತಮ್ಮ ಬ್ಯಾಂಕ್‍ನಲ್ಲಿ ವೇತನದ ಖಾತೆ ತೆರೆದಿರುವ ಪೊಲೀಸರು, ಆಕಸ್ಮಿಕವಾಗಿ ಅಪಘಾತ ಪ್ರಕರಣದಲ್ಲಿ ಮೃತಪಟ್ಟು, ಇಲ್ಲವೆ ಶಾಶ್ವತ ಅಂಗವಿಕಲತೆಗೆ ಗುರಿಯಾಗಿರುವ ಕುಟುಂಬಗಳಿಗೆ ವಿಮೆ ಹಣ ನೀಡಲಾಗಿದೆ ಎಂದರು.
ಕೆಎಸ್ಸಾರ್ಪಿ ಎಎಸ್ಸೈ ಅಪ್ಪಾಜಿ, ಮುಖ್ಯ ಪೇದೆಗಳಾದ ಮಂಗಳಗೌರಿ, ಚಿದಾನಂದ, ಪೇದೆಗಳಾದ ಶ್ವೇತಾ ಹಾಗೂ ಹನುಮಂತ ರಾಯಪ್ಪ ಅವರ ಕುಟುಂಬದವರಿಗೆ ತಲಾ 30 ಲಕ್ಷ ರೂ. ಗಳ ವಿಮೆ ಹಣವನ್ನು ನೀಡಲಾಯಿತು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಕ್ಸಿಸ್ ಬ್ಯಾಂಕಿನ ರಾಜ್ಯ ಹಿರಿಯ ಉಪಾಧ್ಯಕ್ಷ ಸತ್ತಾರ್ ಅಲಿ ಸೇರಿದಂತೆ ಪ್ರಮುಖರಿದ್ದರು.