ಬಲಿಷ್ಠ ಸಮಾಜಗಳನ್ನು ‘2ಎ'ಗೆ ಸೇರ್ಪಡೆ ಹಿಂದುಳಿದ ಜಾತಿಗಳ ಒಕ್ಕೂಟ ವಿರೋಧ

Update: 2021-03-01 15:51 GMT

ಬೆಂಗಳೂರು, ಮಾ. 1: ‘ಲಿಂಗಾಯತ ಪಂಚಮಸಾಲಿ ಸೇರಿದಂತೆ ಮುಂದುವರಿದ, ಬಲಿಷ್ಠ ಸಮಾಜಗಳನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರ್ಪಡೆ'ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ‘ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ', ‘ನಮ್ಮ ಸಮಸ್ಯೆಗಳನ್ನು ಆಲಿಸಿ ಸಾಮಾಜಿಕ ನ್ಯಾಯ ಸೂತ್ರದಡಿ ಅಸಮತೋಲನ ಉಂಟಾಗುವ ಅಪಾಯವನ್ನು ತಪ್ಪಿಸಬೇಕು' ಎಂದು ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದೆ.

ಸೋಮವಾರ ಇಲ್ಲಿನ ಆಯೋಗದ ಕಚೇರಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಖುದ್ದು ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ನೇತೃತ್ವದ ಪದಾಧಿಕಾರಿಗಳ ನಿಯೋಗ, ‘ಆಯೋಗದ ಅಧಿನಿಯಮದ ಪ್ರಕಾರ ವೈಜ್ಞಾನಿಕ ವಿಧಾನಗಳನ್ನು ಅನುಸರಿಸದೆ ಹಿಂದುಳಿದ ವರ್ಗಗಳ ಪಟ್ಟಿಗೆ ಬಲಿಷ್ಠ ಜಾತಿ ಸೇರ್ಪಡೆ ಮಾಡುವುದು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ಬಗೆಯುವ ಅಪಚಾರ' ಎಂದು ಆಕ್ಷೇಪಿಸಿದೆ.

‘ಯಾವುದೇ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಅವರ ಹಿಂದುಳಿದಿರುವಿಕೆ ಬಗ್ಗೆ ಅಧ್ಯಯನ ನಡೆಸಿ ಸಂವಿಧಾನದ 15, 16 ಹಾಗೂ 340ನೇ ವಿಧಿಗಳ ಅನ್ವಯ ಅರ್ಹರಿಗೆ ಮೀಸಲಾತಿ ನೀಡಬೇಕು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಹೀಗಾಗಿ ಯಾವುದೇ ವರದಿ ಇಲ್ಲದೆ 2ಎ ಪಟ್ಟಿಗೆ ಯಾವ ಸಮುದಾಯವನ್ನು ಸೇರ್ಪಡೆ ಮಾಡಬಾರದು' ಎಂದು ನಿಯೋಗ ಆಗ್ರಹಿಸಿದೆ.

‘ಎಲ್ಲ ಗೊಂದಲಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆ(ಜಾತಿಗಣತಿ) ವರದಿಯನ್ನು ಕೂಡಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರಕಾರಕ್ಕೆ ಸಲ್ಲಿಸಿ, ಸರಕಾರ ಆ ವರದಿಯನ್ನು ಬಿಡುಗಡೆ ಮಾಡಬೇಕು. ಜೊತೆಗೆ ಆ ವರದಿಯನ್ನು ಅಂಗೀಕರಿಸಿ ಶೀಘ್ರದಲ್ಲೇ ಜಾರಿಗೆ ತರಬೇಕು' ಎಂದು ಒಕ್ಕೂಟ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News