×
Ad

ಸಂಸದ ಪ್ರತಾಪ್ ಸಿಂಹ ವಿರುದ್ಧ ಶಿಲುಬೆ ಹಿಡಿದು ಕ್ರೈಸ್ತರ ಧರಣಿ: ಸಮುದಾಯದ ಕ್ಷಮೆ ಕೇಳಲು ಪಟ್ಟು

Update: 2021-03-01 21:37 IST

ಬೆಂಗಳೂರು, ಮಾ. 1: ‘ಕುತ್ತಿಗೆಯಲ್ಲಿ ಶಿಲುಬೆ ಹಾಕಿಕೊಂಡು ತಿರುಗಾಡುವವರನ್ನು ಗುರುತಿಸಿ. ಅಂತಹವರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ಫೆ.24ರಂದು ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಪ್ರತಾಪ ಸಿಂಹ ಕೂಡಲೇ ಕ್ರೈಸ್ತ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಕ್ರಿಶ್ಚಿಯನ್ ಪೊಲಿಟಿಕಲ್ ಲೀಡರ್ಸ್ ಫೋರಂ ಎಚ್ಚರಿಸಿದೆ.

ಸೋಮವಾರ ಇಲ್ಲಿನ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಸಮೀಪ ಶಿಲುಬೆಗಳನ್ನು ಹಿಡಿದು ಧರಣಿ ಸತ್ಯಾಗ್ರಹ ನಡೆಸಿದ ಫೋರಂನ ಕಾರ್ಯಕರ್ತರು, ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಮುದಾಯದ ಕ್ಷಮೆ ಕೋರದಿದ್ದರೆ ಅವರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಫೋರಂನ ಮುಖಂಡ ಅಂತೋಣಿ ವಿಕ್ರಂ, ‘ಸಂಸದ ಪ್ರತಾಪ್ ಸಿಂಹ ಎಲ್ಲ ಸಮುದಾಯದ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಅವರಿಗೆ ನಮ್ಮ ತೆರಿಗೆ ಹಣದಿಂದ ವೇತನ, ಭತ್ತೆ ನೀಡಲಾಗುತ್ತದೆ. ಆದರೆ, ಜನರ ತೆರಿಗೆ ಹಣದಲ್ಲಿ ಕ್ರೈಸ್ತ ಸಮುದಾಯಕ್ಕೆ ಸರಕಾರ ಸೌಲಭ್ಯಗಳನ್ನು ನೀಡಲಾಗುತ್ತದೆಯೇ ಹೊರತು ಪ್ರತಾಪ್ ಸಿಂಹ ಅವರ ಜೇಬಿನ ಹಣದಿಂದ ಅಲ್ಲ ಎಂಬ ಜ್ಞಾನ ಅವರಿಗೆ ಇರಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮನಸೋ ಇಚ್ಛೆ, ಬಾಯಿಗೆ ಬಂದಂತೆ ಮಾತನಾಡುವುದು ಬಿಜೆಪಿ ಮುಖಂಡರ ಕೆಟ್ಟ ಚಾಳಿಯಾಗಿದೆ. ಆ ಪಕ್ಷದ ಕೆಲ ಮುಖಂಡರಿಗೆ ಸಮುದಾಯಗಳ ನಿಂದನೆ, ಅವಹೇಳನ ಮಾಡದಿದ್ದರೆ ನಿದ್ದೆ ಬರುವುದಿಲ್ಲ. ಪ್ರತಾಪ್ ಸಿಂಹ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಮರೆತು ಸರ್ವಾಧಿಕಾರಿ ಆಡಳಿತದಲ್ಲಿರುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಅವರು ಟೀಕಿಸಿದರು.

ದೇಶ ಮತ್ತು ರಾಜ್ಯದ ಅಭ್ಯುದಯಕ್ಕೆ ಕ್ರೈಸ್ತರ ಕೊಡುಗೆ ಅರಿವಿದ್ದರೆ ಸಂಸದ ಪ್ರತಾಪ್ ಸಿಂಹ ಇಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಜಾತಿ-ಧರ್ಮದ ಆಧಾರದ ಮೇಲೆ ಮಾತನಾಡುವುದು ಜನಪ್ರತಿನಿಧಿಗೆ ಶೋಭೆಯಲ್ಲ. ಹೀಗಾಗಿ ಕೂಡಲೇ ಸಮುದಾಯದ ಕ್ಷಮೆ ಕೋರಬೇಕು ಎಂದು ವಿಕ್ರಂ ಆಗ್ರಹಿಸಿದರು.

ಡಾ.ರೆ.ಮನೋಹರ ಚಂದ್ರಪ್ರಸಾದ್, ಅನಿಲ್ ಅಂತೋಣಿ, ಕ್ರಿಸ್ಟೋಫರ್ ಸೇರಿ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News