ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

Update: 2021-03-01 17:24 GMT

ಬೆಂಗಳೂರು, ಮಾ.1: ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಜಿ.ಆರ್.ಶಿವಶಂಕರ್, ಬಿ.ನಾಗರತ್ನ ವಹಿಸಿದ್ದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ಹೊರಟು ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡರು.

ಸಮಾವೇಶದಲ್ಲಿ ಸೇವಾಹಿರಿತನದ ಮೇಲೆ ಗೌರವಧನ ಹೆಚ್ಚಳ ಮಾಡಿ ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್‍ಐ ಸೌಲಭ್ಯ, ಎಲ್‍ಕೆಜಿ ಮತ್ತು ಯುಕೆಜಿಯನ್ನ ಅಂಗನವಾಡಿಯಲ್ಲೇ ಪ್ರಾರಂಭಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.

ಪಿಂಚಿಣಿ ಸೇವೆ ಸೇರಿ 7 ಬೇಡಿಕೆಗಳನ್ನು ಈಡೇರಿಸಿ ಸಂಕಷ್ಟದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಮಾತೃಪೂರ್ಣ ಯೋಜನೆಯ ಬಗ್ಗೆ ಸರಕಾರ ಸಮಗ್ರವಾಗಿ ಅಧ್ಯಯನ ನಡೆಸಿ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಪೌಷ್ಠಿಕ ಆಹಾರವನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು ಅಥವಾ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು ಹಾಗೂ ಸಮಗ್ರ ಬಾಲವಿಕಾಸ ಯೋಜನೆಯಡಿ ಕಳೆದ 5 ವರ್ಷಕ್ಕೆ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಎಲ್ಲ ಮೇಲ್ವಿಚಾರಕರನ್ನು ವರ್ಗಾವಣೆ ಮಾಡಬೇಕು, ಸಮಗ್ರ ಬಾಲವಿಕಾಸ ಯೋಜನೆ ಉಳಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News