ಪೂಜೆ ನೆಪದಲ್ಲಿ ಚಿನ್ನಾಭರಣ ಕಳವು: ಮಹಿಳೆಯರು ಸೇರಿದಂತೆ ನಾಲ್ವರ ಬಂಧನ

Update: 2021-03-01 17:25 GMT

ಬೆಂಗಳೂರು, ಮಾ.1: ಓಂ ಶಕ್ತಿ ವೇಷ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಇಲ್ಲಿನ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಜ್ಜಲ ಭಾರತಿ(45), ರಾಗೆ ಲಕ್ಷ್ಮಿದೇವಿ(39), ನಾಗರಾಜ್(45), ರಂಜಿತ್(26) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಗ್ರಾಮದ ರಸ್ತೆ ಪಕ್ಕದಲ್ಲಿ ಭೂಪತ್ತಮ್ಮ ಎಂಬ ಮಹಿಳೆ ಹೋಟೆಲ್ ನಡೆಸುತ್ತಿದ್ದರು. ಆರೋಪಿಗಳ ಗುಂಪು ತಿಂಡಿ ತಿನ್ನಲೆಂದು ಹೋಟೆಲ್‍ಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಹೋಟೆಲ್ ಮಾಲಕರಾದ ಭೂಪತ್ತಮ್ಮನ ಜೊತೆ ಮಾತನಾಡುತ್ತಾ ನಿಮ್ಮ ಯಜಮಾನನಿಗೆ ಅಸ್ತಮಾ ಕಾಯಿಲೆ ಇದೆ. ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿದ್ದಾರೆ. ಓಂ ಶಕ್ತಿ ವೇಷಧಾರಿಗಳಾದ ಮಹಿಳೆಯರ ಮಾತು ನಂಬಿದ ಭೂಪತ್ತಮ್ಮ, ಮನೆಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿದ್ದಾಳೆ.

ಪೂಜೆಗಾಗಿ 25 ಸಾವಿರ ಹಣವನ್ನು ತೆಗೆದುಕೊಂಡಿದ್ದಾರೆ. ನಂತರ ಮನೆಯಲ್ಲಿರುವ ಒಡವೆಗಳನ್ನು ಡಬ್ಬಿಗೆ ಹಾಕಿ ಪೂಜೆ ಮಾಡುವಂತೆ ಹೇಳಿ ಅಲ್ಲಿಂದ ಆರೋಪಿಗಳ ಒಡವೆ ಜೊತೆ ಪರಾರಿಯಾಗಿದ್ದಾರೆ. ಡಬ್ಬಿ ತೆಗೆದು ನೋಡಿದಾಗ ಖಾಲಿ ಡಬ್ಬಿ ಮಾತ್ರ ಇದ್ದು, ಭೂಪತ್ತಮ್ಮ ವಂಚನೆಗೊಳಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಮೊಬೈಲ್ ಸಂಪರ್ಕ ಆಧಾರದ ಮೇಲೆ ಆರೋಪಿಗಳನ್ನು ಬೆಂಗಳೂರಿನ ನಾಗರಭಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News