ಸರಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಅಂಗನವಾಡಿ ನೌಕರರ ಬೃಹತ್ ಹೋರಾಟ

Update: 2021-03-02 13:16 GMT

ಬೆಂಗಳೂರು : ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಸೇರ್ಪಡೆ (AIUTUC) ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಇಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ನಡೆಯಿತು.

ರಾಜ್ಯಾದ್ಯಂತ ವಿವಿಧ  ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು, ತಮ್ಮನ್ನು ಸರ್ಕಾರದ 'ಸಿ' ಮತ್ತು 'ಡಿ' ಗ್ರೂಪ್ ನೌಕರರೆಂದು ಪರಿಗಣಿಸಬೇಕು, ಅಲ್ಲಿಯವರೆಗೆ, ಸರ್ಕಾರದ ಈ ವೃಂದಗಳ ನೌಕರರಿಗೆ ಸರಿಸಮನಾಗಿ ಮಾಸಿಕ ವೇತನ ಮತ್ತಿತರ ಸೌಕರ್ಯಗಳನ್ನು ನೀಡಬೇಕು. ಕಾರ್ಯಕರ್ತೆಯರಿಗೆ ರೂ. 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ 21 ಸಾವಿರ ಮಾಸಿಕ ವೇತನ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಚಳುವಳಿ ನಡೆಸಿದರು.

ಹೋರಾಟಗಾರರು, ಕೊಡುಗೆ ಆಧರಿತ ಪಿಂಚಣಿ ಯೋಜನೆ ಕೈ ಬಿಟ್ಟು, ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸುವುದರ ಜೊತೆಗೆ, ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೆ. ಸೋಮಶೇಖರ್ ಯಾದಗಿರಿ, ರಾಜ್ಯ ಅಧಕ್ಷರು, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಅವರು ಮಾತನಾಡುತ್ತಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರ ಸರಿಸಮ ಸ್ಥಾನಮಾನದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಗೌರವಧನದ ಕಾರ್ಯಕರ್ತೆಯರು ಎಂದು ಪರಿಗಣಿಸಿದೆ. ಯೋಜನೆ ಆರಂಭವಾಗಿ 45 ವರ್ಷಗಳು ಕಳೆದರೂ ಅತ್ಯಂತ ಕಡಿಮೆ ಗೌರವ ಧನ ನೀಡಲಾಗುತ್ತಿದೆ. ದಿನನಿತ್ಯವೂ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಸರ್ಕಾರ ಈಗ ನೀಡುತ್ತಿರುವ ಕಡಿಮೆ ಗೌರವಧನವು ಈ ನೌಕರರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ. ಅದ್ದರಿಂದಾಗಿ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಜೀವನ ಯೋಗ್ಯ ಮಾಸಿಕ ವೇತನ, ಸುಭದ್ರ ವಿಶ್ರಾಂತ ಜೀವನ ನಡೆಸುವಷ್ಟು ನಿವೃತ್ತಿ ಪಿಂಚಣಿ ಯಂತಹ ಪ್ರಮುಖ ಬೇಡಿಕೆಗಳು ಸರ್ಕಾರ ಈಡೇರಿಸಬೇಕು”, ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಚಳುವಳಿಯನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಮಾತನಾಡಿದ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ (AIUTUC) ರಾಜ್ಯ ಉಪಾಧ್ಯಕ್ಷರಾದ ಕಾ. ಕೆ. ವಿ. ಭಟ್, “ದೇಶವು ಹಿಂದೆಂದೂ ಕಾಣದ ಅತಂತ್ರ ಪರಿಸ್ಥಿತಿಗೆ ತಲುಪಿದೆ. ಕೇಂದ್ರ ಬಿಜೆಪಿ ಸರ್ಕಾರವು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಾಮಾನ್ಯ ಜನರನ್ನು ಶೋಷಣೆ ಮಾಡುತ್ತಿದೆ. ಬೆಲೆ ಏರಿಕೆ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಹಾಗೂ ಇತ್ತೀಚೆಗೆ ನಮ್ಮ ರೈತರ ವಿರುಧ್ಧವಾಗಿಯೂ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಶೋಷಣೆಯ ಮಹಾಪೂರವನ್ನೇ ಹರಿದು ಬಿಡುತ್ತಿದ್ದಾರೆ. ಇಂದು ಅಂಗನವಾಡಿ ನೌಕರರನ್ನು ಬೀದಿಗೆ ಇಳಿಸಿದ್ದಾರೆ, ಇದು ಅತ್ಯಂತ ವಿಷಾದನೀಯ” ಎಂದು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ರಾಜ್ಯ ಉಪಾಧ್ಯಕ್ಷರಾದ ಕಾ. ಉಮಾದೇವಿ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಇನ್ನಿತರ ರಾಜ್ಯ ಮತ್ತು ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News