ಕಾಮಗಾರಿ ನಿರ್ವಹಿಸದೇ ಹಣ ಬಿಡುಗಡೆ: ಕ್ರಮಕ್ಕೆ ಆಗ್ರಹ

Update: 2021-03-02 15:28 GMT

ಬೆಂಗಳೂರು, ಮಾ.2: ಎಸ್ಸಿ-ಎಸ್ಟಿ ಅನುದಾನದಲ್ಲಿ ಕಾಮಗಾರಿ ನಿರ್ವಹಿಸದೇ ಹಣ ಬಿಡುಗಡೆ ಮಾಡಿಸಿಕೊಳ್ಳಲು ಯತ್ನಿಸುತ್ತಿರುವ ಹಗರಣವನ್ನು ಶೀಘ್ರವಾಗಿ ತನಿಖೆಗೆ ಒಳಪಡಿಸಬೇಕೆಂದು ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ಪತ್ರ ಬರೆದಿರುವ ಅವರು, ಪಾಲಿಕೆಯ ಪಶ್ಚಿಮ ವಲಯದ ಗಾಂಧಿನಗರ ವಿಭಾಗದ ವಾರ್ಡ್ ಸಂಖ್ಯೆ 120ರ ಎರಡು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೆಕ್ಕ ಶೀರ್ಷಿಕೆ ಪಿ1878 ಅಡಿಯಲ್ಲಿ 4 ಕೋಟಿ ರೂಪಾಯಿಗಳಷ್ಟು ಮೊತ್ತವೂ ಎಸ್ಸಿ-ಎಸ್ಟಿ ಅನುದಾನದಡಿ ಬಿಡುಗಡೆಯಾಗಿದೆ. ಇದಕ್ಕೆ ಕೆಆರ್‍ಐಡಿಎಲ್ ಮೂಲಕ ಕೆಲಸ ನಿರ್ವಹಿಸಲು ಅನುಮತಿಯನ್ನು ನೀಡಲಾಗಿತ್ತು.

ಆದರೆ, ಕಾಟನ್‍ಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆಗಿದ್ದ ರೇವಣ್ಣ ಅವರು ಪ್ರಭಾರೀ ಕಾರ್ಯಪಾಲಕ ಅಭಿಯಂತರರಾಗಿಯೂ ಕಾರ್ಯ ನಿರ್ವಹಿಸಿರುವ ಅವಧಿಯಲ್ಲಿ ಮತ್ತು ಸಹಾಯಕ ಅಭಿಯಂತರ ಮೋಹನ್ ಅವರು ವಾರ್ಡ್ ಸಂಖ್ಯೆ 120 ರಲ್ಲಿ ಕಾರ್ಯ ನಿರ್ವಹಿಸಿರುವ ಅವಧಿಯಲ್ಲಿ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.

ಕಾಮಗಾರಿಗಳನ್ನು ನಿರ್ವಹಣೆ ಮಾಡದೆಯೇ 4 ಕೋಟಿ ರೂ.ಗಳ ಮೊತ್ತದ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧದ ಕಡತವು ಈಗಾಗಲೇ ಅನುಮೋದನೆಗಾಗಿ ವಲಯ ಮಟ್ಟದಲ್ಲಿ ಇರುವುದು ಕಂಡುಬಂದಿರುತ್ತದೆ.

ಹಾಗಾಗಿ, 4 ಕೋಟಿ ರೂ.ಮೊತ್ತದ ಈ 2 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳ ಪ್ರಾರಂಭ, ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ಕಾಮಗಾರಿ ಪೂರ್ಣಗೊಂಡಿರುವ ಮಾಹಿತಿಗಳನ್ನು ತನಿಖೆ ಮಾಡುವುದು ಅತ್ಯಂತ ಸೂಕ್ತವಾಗಿರುವ ಕಾರಣ ಈ ಎರಡು ಕಾಮಗಾರಿಗಳ ತನಿಖೆಯನ್ನು ಟಿವಿಸಿಸಿಗೆ ವಹಿಸಿ ಆದೇಶಿಸಬೇಕೆಂದು ಆಗ್ರಹಿಸಿದರು.

'ವರದಿ ನೀಡುವಂತೆ ಸೂಚನೆ'
ಬಿಬಿಎಂಪಿಯ ಕಾಟನ್‍ಪೇಟೆ ವಾರ್ಡ್‍ನಲ್ಲಿ ಪಿ-1878 ಲೆಕ್ಕ ಶೀರ್ಷಿಕೆ ಅಡಿಯ ಎಸ್ಸಿ-ಎಸ್ಟಿ ಅನದಾನದಲ್ಲಿ ಕೈಗೊಳ್ಳಬೇಕಿದ್ದ ತಲಾ 2 ಕೋಟಿ ಮೊತ್ತದಂತೆ 4 ಕೋಟಿ ಮೊತ್ತದ ಎರಡು ಕಾಮಗಾರಿಗಳನ್ನು ನಿರ್ವಹಣೆ ಮಾಡದೆಯೇ, ಕೆಆರ್‍ಐಡಿಎಲ್ ಮೂಲಕ ಹಣ ಬಿಡುಗಡೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆರೋಪ ಸಂಬಂಧ ತನಿಖಾ ವರದಿಯನ್ನು 15 ದಿನಗಳ ಒಳಗಾಗಿ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ ಎಂದು ಎನ್.ಆರ್.ರಮೇಶ್ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News