ನೀವು ವ್ಯಾಯಾಮ ಮಾಡುತ್ತೀರಾದರೆ ಈ ತಪ್ಪುಗಳನ್ನೆಂದೂ ಮಾಡಬೇಡಿ

Update: 2021-03-02 18:47 GMT

ವ್ಯಾಯಾಮವು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ,ಹೀಗಾಗಿ ನಿಯಮಿತ ವ್ಯಾಯಾಮವು ನಮ್ಮ ಬದುಕಿನ ಭಾಗವಾಗಿರಬೇಕು. ಅದು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ,ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ,ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ. ಅದು ನಮ್ಮ ಮನಸ್ಸು ಮತ್ತು ಶರೀರ ಎರಡನ್ನೂ ನಿರಾಳಗೊಳಿಸುತ್ತದೆ. ಆದರೆ ಕೆಲವರು ವ್ಯಾಯಾಮದ ಸಂದರ್ಭದಲ್ಲಿ ತಮಗೆ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಇದರಿಂದಾಗಿ ಅವರ ಶ್ರಮವು ನಿರೀಕ್ಷಿತ ಫಲವನ್ನು ನೀಡುವುದಿಲ್ಲ. ಅಂತಹ ಕೆಲವು ಸಾಮಾನ್ಯ ತಪ್ಪುಗಳ ಕುರಿತು ಮಾಹಿತಿಗಳಿಲ್ಲಿವೆ......

 ವಾರ್ಮ್ ಅಪ್ ತಪ್ಪಿಸುವುದು

ವ್ಯಾಯಾಮವನ್ನು ಮಾಡುವ ಮುನ್ನ ಕೊಂಚ ವಾರ್ಮ್ ಅಪ್ ಅಥವಾ ತಾಲೀಮು ಮಾಡುವುದು ಅಗತ್ಯವಾಗುತ್ತದೆ. ಇದು ನಿಮ್ಮ ಸ್ನಾಯುಗಳು,ಹೃದಯ ಮತ್ತು ಶ್ವಾಸಕೋಶಗಳನ್ನು ದೈಹಿಕ ಚಟುವಟಿಕೆಗೆ ಸಜ್ಜಾಗಿಸುತ್ತದೆ,ಶರೀರಕ್ಕೆ ಜಖಂ ಆಗುವ ಅಪಾಯವನ್ನು ತಪ್ಪಿಸುತ್ತದೆ ಮತ್ತು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ವಾರ್ಮ್ ಅಪ್ ಬಳಿಕ ಸ್ನಾಯುಗಳ ಮತ್ತು ಒಟ್ಟಾರೆ ಶರೀರದ ಉಷ್ಣತೆಯು ಹೆಚ್ಚುತ್ತದೆ ಮತ್ತು ಇದು ರಕ್ತಸಂಚಾರವನ್ನೂ ಹೆಚ್ಚಿಸುತ್ತದೆ.

 ಅಸಮಂಜಸ ವ್ಯಾಯಾಮ

ವ್ಯಾಯಾಮದಲ್ಲಿ ಸಮಂಜಸತೆಯನ್ನು ಕಾಯ್ದುಕೊಳ್ಳದಿರುವುದು ಜನರು ಮಾಡುವ ತಪ್ಪುಗಳಲ್ಲೊಂದಾಗಿದೆ. ಹಲವರು ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದಿಲ್ಲ. ಹೆಚ್ಚಿನವರು ಒಂದು ವ್ಯಾಯಾಮವನ್ನು ಸರಿಯಾಗಿ ಪೂರ್ಣಗೊಳಿಸುವ ಮುನ್ನವೇ ಮುಂದಿನದಕ್ಕೆ ಹಾರುತ್ತಾರೆ. ಅತ್ಯುತ್ತಮ ಪರಿಣಾಮಕ್ಕಾಗಿ ವ್ಯಾಯಾಮದ ಸೂಕ್ತ ಪ್ಲಾನ್‌ನ್ನು ಹೊಂದಿರಬೇಕು ಮತ್ತು ಅದನ್ನು ಸರಿಯಾಗಿ ಅನುಸರಿಸಬೇಕು. ಇದರಿಂದ ಗುರಿಸಾಧನೆ ಸುಲಭವಾಗುತ್ತದೆ. ವ್ಯಾಯಾಮವನ್ನು ಸರಿಯಾದ ಪದ್ಧತಿಯಲ್ಲಿ ನಿಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡಬೇಕು.

 ಸಾಕಷ್ಟು ನಿದ್ರೆ ಮಾಡದಿರುವುದು

 ಆರೋಗ್ಯಕರ ವ್ಯಾಯಾಮ ದಿನಚರಿಗೆ ಕನಿಷ್ಠ 7-8 ಗಂಟೆಗಳ ಒಳ್ಳೆಯ ನಿದ್ರೆಯ ಅಗತ್ಯವಿದೆ. ಸಾಕಷ್ಟು ಒಳ್ಳೆಯ ನಿದ್ರೆಯನ್ನು ಮಾಡುವುದು ಜೀವನಶೈಲಿಯ ಭಾಗವಾಗಿರಬೇಕು. ಒಳ್ಳೆಯ ನಿದ್ರೆಯು ನಮ್ಮನ್ನು ಉಲ್ಲಸಿತರನ್ನಾಗಿಸುವ ಜೊತೆಗೆ ಸ್ನಾಯುಗಳ ಬೆಳವಣಿಗೆ ಮತ್ತು ಚೇತರಿಕೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ನಮ್ಮ ಹಾರ್ಮೋನ್‌ಗಳನ್ನೂ ನಿಯಂತ್ರಿಸುವ ಸಾಮರ್ಥ್ಯವಿದೆ. ಹೆಚ್ಚಿನ ನಿರೋಧಕ ಶಕ್ತಿ,ಜ್ಞಾಪಕ ಶಕ್ತಿಯ ಹೆಚ್ಚಳ ಇವು ಸೇರಿದಂತೆ ಹಲವಾರು ಆರೋಗ್ಯಲಾಭಗಳನ್ನು ನಿದ್ರೆಯು ನಮಗೆ ನೀಡುತ್ತದೆ.

  ಫೋನ್ ಜೊತೆಯಲ್ಲಿಯೇ ಇಟ್ಟುಕೊಳ್ಳುವುದು ನೀವು ವ್ಯಾಯಾಮ ಮಾಡುವಾಗ ಫೋನ್ ಅನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಜಾಗಿಂಗ್ ಅಥವಾ ಸೈಕ್ಲಿಂಗ್ ಮಾಡುತ್ತಿದ್ದರೂ ಫೋನ್ ಅನ್ನು ಜೊತೆಯಲ್ಲಿ ಒಯ್ಯುವುದನ್ನು ತಪ್ಪಿಸಬೇಕು. ಏಕೆಂದರೆ ಮೊಬೈಲ್ ಫೋನ್ ಜೊತೆಯಲ್ಲಿದ್ದರೆ ನೀವು ಆಗಾಗ್ಗೆ ಅದನ್ನು ನೋಡುತ್ತೀರಿ ಮತ್ತು ಇದು ನಿಮ್ಮ ಮನಃಸ್ಥಿತಿ ಮತ್ತು ವ್ಯಾಯಾಮದತ್ತ ಏಕಾಗ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

 ಸಾಕಷ್ಟು ಆಹಾರ ಸೇವಿಸದಿರುವುದು

 ಖಾಲಿಹೊಟ್ಟೆಯಲ್ಲಿ ವ್ಯಾಯಾಮವನ್ನು ಮಾಡುವುದು ಶರೀರದಲ್ಲಿ ಶಕ್ತಿಯನ್ನು ಕುಂದಿಸುತ್ತದೆ. ವ್ಯಾಯಾಮ ಮಾಡುತ್ತಿರೋ ಬಿಡುತ್ತಿರೋ ಗೊತ್ತಿಲ್ಲ,ಆದರೆ ನೀವು ಸಾಕಷ್ಟು ಆಹಾರವನ್ನು ಸೇವಿಸಬೇಕು ಮತ್ತು ಸುದೀಘ ಸಮಯ ಖಾಲಿ ಹೊಟ್ಟೆಯಲ್ಲಿ ಇರಕೂಡದು. ಉತ್ತಮ ಆರೋಗ್ಯಕರವಾದ ಆಹಾರವು ಎಲ್ಲ 40 ಪೌಷ್ಟಿಕಾಂಶಗಳನ್ನು ಒಳಗೊಂಡಿರಬೇಕು

 ಯೋಜನೆ ಇಲ್ಲದಿರುವುದು

ನಿರಂತರತೆಯನ್ನು ಕಾಯ್ದುಕೊಳ್ಳಲು ವ್ಯಾಯಾಮಕ್ಕೆ ಸೂಕ್ತ ಯೋಜನೆಯೊಂದನ್ನು ಹೊಂದಿರುವುದು ಮುಖ್ಯವಾಗಿದೆ. ಏಕಾಗ್ರತೆಯನ್ನು ಕಳೆದುಕೊಳ್ಳುವುದು ಮತ್ತು ನಿಮ್ಮ ಗುರಿಯನ್ನು ಮರೆತುಬಿಡುವುದು ಸುಲಭ,ಆದರೆ ದಿನನಿತ್ಯ ವ್ಯಾಯಾಮ ಮಾಡುವ ಸ್ಥೈರ್ಯ ಮತ್ತು ಶಕ್ತಿಯನ್ನು ಕ್ರೋಢೀಕರಿಸುವುದು ನಿಜಕ್ಕೂ ಅತ್ಯಂತ ಸವಾಲಿನದಾಗಿದೆ. ಸೂಕ್ತ ಕೋಚ್ ಮಾರ್ಗದರ್ಶನದಡಿ ನಿಮ್ಮ ವ್ಯಾಯಾಮಕ್ಕಾಗಿ ಯೋಜನೆಯೊಂದನ್ನು ರೂಪಿಸಿಕೊಳ್ಳಿ.

 ಸಾಕಷ್ಟು ದ್ರವಗಳನ್ನು ಸೇವಿಸದಿರುವುದು

ಹೇಗೆ ಎಣ್ಣೆಯಿಲ್ಲದೆ ಯಾವುದೇ ಯಂತ್ರವು ಕೆಲಸ ಮಾಡುವುದಿಲ್ಲವೋ,ಹೇಗೆ ಇಂಧನವಿಲ್ಲದೆ ವಾಹನಗಳು ಚಲಿಸುವುದಿಲ್ಲವೋ ಅದೇ ರೀತಿ ನೀರು ಮತ್ತು ಇತರ ದ್ರವಗಳಿಲ್ಲದೆ ನಾವು ಬದುಕುಳಿಯುವುದಿಲ್ಲ. ನೀವು ವ್ಯಾಯಾಮ ಮಾಡುತ್ತಿರುವಾಗ ಉಷ್ಣತೆಯು ಹೆಚ್ಚಾಗುವುದರಿಂದ ಶರೀರವು ಒತ್ತಡವನ್ನು ಅನುಭವಿಸುತ್ತದೆ. ಇಂತಹ ಸಮಯದಲ್ಲಿ ನೀರು ಸೇವಿಸುವ ಮೂಲಕ ಇಂತಹ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ನೀರು ಮತ್ತು ಇತರ ದ್ರವಗಳ ಸೇವನೆಯು ವ್ಯಾಯಾಮದ ಫಲಿತಾಂಶವನ್ನೂ ಉತ್ತಮಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News