ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶಕ್ಕಾಗಿ ಭಾರತಕ್ಕೆ ಕನಿಷ್ಠ ಡ್ರಾ ಅಗತ್ಯ

Update: 2021-03-03 18:01 GMT


  ಅಹಮದಾಬಾದ್,ಮಾ.3:ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮತ್ತೆ ಸ್ಪಿನ್ನರ್ ಮೂಲಕ ಕಟ್ಟಿ ಹಾಕಲು ಟೀಮ್ ಇಂಡಿಯಾ ತಯಾರಿ ನಡೆಸಿದೆ.

 ನೂಝಿಲ್ಯಾಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಲು ವಿರಾಟ್ ಕೊಹ್ಲಿ ತಂಡ ಅಂತಿಮ ಪಂದ್ಯದಲ್ಲಿ ಗೆಲ್ಲದಿದ್ದರೂ, ಕನಿಷ್ಠ ಡ್ರಾ ಸಾಧಿಸಿದರೆ ಸಾಕಾಗುತ್ತದೆ. ಏಕೆಂದರೆ ಇದೀಗ ನಡೆದಿರುವ ಮೂರು ಪಂದ್ಯಗಳಲ್ಲಿ 2-1 ಮುನ್ನಡೆ ಸಾಧಿಸಿದೆ.

 ನವೀಕರಣಗೊಂಡ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕಳೆದ ಡೇ- ನೈಟ್ ಟೆಸ್ಟ್‌ನಲ್ಲಿ ಅಕ್ಷರ್ ಪಟೇಲ್ ದಾಳಿಗೆ ಸಿಲುಕಿ ಇಂಗ್ಲೆಂಡ್ ಹೀನಾಯ ಸೋಲು ಅನುಭವಿಸಿತ್ತು. ಐದು ದಿನಗಳ ಪಂದ್ಯ ಎರಡು ದಿನಗಳಲ್ಲಿಮುಗಿದಿತ್ತು. ಕೊಹ್ಲಿ ಭಾರತದ ಅತ್ಯಂತ ಸಮೃದ್ಧ ಟೆಸ್ಟ್ ನಾಯಕನಾಗಿದ್ದರೂ, ಐಸಿಸಿ ಇವೆಂಟ್‌ಗಳಿಗೆ ಸಂಬಂಧಿಸಿದಂತೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಂದಿದ್ದ ಯಶಸ್ಸನ್ನು ತಾನು ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

 ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಪತನಗೊಂಡಿರುವ ಇಂಗ್ಲೆಂಡ್‌ನ 60 ವಿಕೆಟ್‌ಗಳಲ್ಲಿ 49ನ್ನು ಭಾರತದ ಸ್ಪಿನ್ನರ್‌ಗಳು ಪಡೆದಿದ್ದಾರೆ. ಅಂತಿಮ ಪಂದ್ಯದಲ್ಲೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.

  ಭಾರತದ ಪರ ಸ್ಪಿನ್ನರ್‌ಗಳು ಮಿಂಚಿದ್ದಾರೆ.ಆದರೆ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಎಲ್ಲರ ಬ್ಯಾಟಿಂಗ್ ಸಾಮರ್ಥ್ಯ ಅನಾವರಣಗೊಂಡಿಲ್ಲ. ರೋಹಿತ್ ಶರ್ಮಾ ಮೂರು ಪಂದ್ಯಗಳಲ್ಲಿ 296 ರನ್ ಗಳಿಸಿದ್ದು, ಎರಡನೇ ಅತ್ಯುತ್ತಮ ಸ್ಕೋರ್ ಅಶ್ವಿನ್ (176 ರನ್)ಅವರದ್ದು, ರೋಹಿತ್ ಕಷ್ಟಕರವಾದ ಚೆಪಾಕ್ ಕ್ರೀಡಾಂಗಣದಲ್ಲಿ ಶತಕ ಗಳಿಸಿದರು.

 ರೋಹಿತ್ ಅವರ ಹೊರತಾಗಿ ಭಾರತದ ಯಾವುದೇ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ. ಕೊಹ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ಶುಬ್‌ಮನ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಇನಿಂಗ್ಸ್ ಗಳಲ್ಲಿ ಮಿಂಚಿದ್ದಾರೆ. ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಉಪ-ಭೂಖಂಡದ ಟ್ರಾಕ್‌ಗಳಲ್ಲಿ ಬೌಲಿಂಗ್ ಮಾಡುವ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾದ ವೇಗಿ ಜಸ್‌ಪ್ರೀತ್ ಬುಮ್ರಾ ಇರುವುದಿಲ್ಲವಾದರೂ, ಉಮೇಶ್ ಯಾದವ್ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಿದೆ.

ಇಶಾಂತ್ ಶರ್ಮಾ ಅಥವಾ ಮುಹಮ್ಮದ್ ಸಿರಾಜ್ ಅವರೊಂದಿಗೆ ದಾಳಿಗೆ ಇಳಿಯುವ ವಿಚಾರ ಸ್ಪಷ್ಟಗೊಂಡಿಲ್ಲ. ಇಂಗ್ಲೆಂಡ್‌ಗೆ ಸಂಬಂಧಿಸಿದಂತೆ ತಂಡದ ಕಳಪೆ ಆಯ್ಕೆಯು ಕಳಪೆ ಬ್ಯಾಟಿಂಗ್‌ಗೆ ಕಾರಣವಾಗಿದೆ. ಜೋ ರೂಟ್ (333 ರನ್) ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಅವರ ಬಳಿಕ ಗರಿಷ್ಠ ಸ್ಕೋರ್ ದಾಖಲಿಸಿದವರು ಬೆನ್ ಸ್ಟೋಕ್ಸ್ (146).

ಮೊಟೆರಾದಲ್ಲಿ ಎರಡನೇ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಿತ್ತು. ರೂಟ್ ದಾಳಿಗಿಳಿದು 8 ಕ್ಕೆ 5 ವಿಕೆಟ್ ಕಬಳಿಸಿದರು. ಬೌಲಿಂಗ್‌ನಲ್ಲಿ ಇದು ರೂಟ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಜಾಕ್ ಲೀಚ್ 16 ವಿಕೆಟ್ ಪಡೆದಿದ್ದಾರೆ. ಅವರು ತಮ್ಮ ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.

ತಂಡದ ಸಮಾಚಾರ

 ಬುಮ್ರಾ ಅನುಪಸ್ಥಿತಿಯಿಂದಾಗಿ ತಂಡದಲ್ಲಿ ಕನಿಷ್ಠ ಒಂದು ಬದಲಾವಣೆ ನಿರೀಕ್ಷಿತ. ಆಸ್ಟ್ರೇಲಿಯದಲ್ಲಿ ಪಾದಾರ್ಪಣೆ ಮಾಡಿದ್ದ ಯುವ ವೇಗಿ ಮುಹಮ್ಮದ್ ಸಿರಾಜ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಉಮೇಶ್ ಯಾದವ್ ತವರಿನಲ್ಲಿ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಾಶಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ ಹೊಂದಿರುವ ಹಿನ್ನೆಲೆಯಲ್ಲಿ ಕುಲದೀಪ್ ಯಾದವ್‌ಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಇಂಗ್ಲೆಂಡ್ ಅಂತಿಮ ಪಂದ್ಯಕ್ಕೆ ತಮಲ್ಲಿ ಲಭ್ಯವಿರುವ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಒಂದು ಬದಲಾವಣೆಯು ಬಹುತೇಕ ಖಚಿತವಾಗಿದೆ. ಸ್ಟುವರ್ಟ್ ಬ್ರಾಡ್‌ನ ಸ್ಥಾನದಲ್ಲಿ ಡೊಮ್ ಬೆಸ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳ ಹೋರಾಟಗಳ ಹೊರತಾಗಿಯೂ, ಅನಿರೀಕ್ಷಿತ ಪ್ರದರ್ಶನ ಯಾರಿಂದಲೂ ಕಂಡು ಬಂದಿಲ್ಲ. ಮೂರನೇ ಟೆಸ್ಟ್‌ನಲ್ಲಿ ಆಡಿದ ಅಗ್ರಆರು ಮಂದಿಯನ್ನು ಇಂಗ್ಲೆಂಡ್ ಆಯ್ಕೆ ಮಾಡಿಕೊಳ್ಳಬಹುದು.

ಸಂಭಾವ್ಯ ತಂಡ

ಭಾರತ:  ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಬ್‌ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಉಮೇಶ್ ಯಾದವ್/ಮುಹಮ್ಮದ್ ಸಿರಾಜ್.

ಇಂಗ್ಲೆಂಡ್ : ಜೋ ರೂಟ್ (ನಾಯಕ), ಡೊಮ್ ಸಿಬ್ಲಿ, ಜಾಕ್ ಕ್ರಾಲೆ, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಒಲ್ಲಿ ಪೋಪ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಡೊಮ್ ಬೆಸ್, ಜಾಕ್ ಲೀಚ್, ಜೋಫ್ರಾ ಆರ್ಚರ್, ಜೇಮ್ಸ್ ಆ್ಯಂಡರ್ಸನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News