‘ಲವ್ ಜಿಹಾದ್’ ಶಬ್ದವನ್ನು ನಾವು ಒಪ್ಪುವುದಿಲ್ಲ,ಆದರೆ ಮತಾಂತರ ನಿಷೇಧ ಕಾನೂನನ್ನು ಬೆಂಬಲಿಸುತ್ತೇವೆ

Update: 2021-03-04 14:27 GMT

ಚಂಡಿಗಡ,ಮಾ.4: ‘ಲವ್ ಜಿಹಾದ್’ ಶಬ್ದವನ್ನು ತಾನು ಒಪ್ಪುವುದಿಲ್ಲ ಎಂದು ಹರ್ಯಾಣದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿಯ ಮಿತ್ರಪಕ್ಷ ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯ ಅಧ್ಯಕ್ಷ ದುಷ್ಯಂತ ಚೌಟಾಲಾ ಅವರು ಗುರುವಾರ ಇಲ್ಲಿ ಹೇಳಿದರು. ಬಲವಂತದ ಧಾರ್ಮಿಕ ಮತಾಂತರಗಳ ವಿರುದ್ಧ ಕಾನೂನೊಂದನ್ನು ತರಲು ಹರ್ಯಾಣ ಸರಕಾರವು ಸಜ್ಜಾಗುತ್ತಿರುವ ಸಮಯದಲ್ಲಿ ಚೌಟಾಲಾರ ಈ ಹೇಳಿಕೆ ಹೊರಬಿದ್ದಿದೆ.

‘ನಿರ್ದಿಷ್ಟವಾಗಿ ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಾನೂನೊಂದನ್ನು ನಾವು ಹೊಂದಲಿದ್ದೇವೆ. ಅದನ್ನು ಸದನದಲ್ಲಿ ಮಂಡಿಸಿದರೆ ನಮ್ಮ ಪಕ್ಷವು ಖಂಡಿತವಾಗಿಯೂ ಅದನ್ನು ಬೆಂಬಲಿಸುತ್ತದೆ. ಯಾವುದೇ ಧರ್ಮಕ್ಕೆ ಬಲವಂತದ ಮತಾಂತರದ ವಿರುದ್ಧ ಕಾನೂನನ್ನು ನಾವು ತರಲಿದ್ದೇವೆ ’ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಚೌಟಾಲಾ ಹೇಳಿದರು.

ಸ್ವಂತ ಇಚ್ಛೆಯಿಂದ ಬೇರೆ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಯನ್ನು ಯಾವುದೇ ಕಾನೂನು ತಡೆಯಲು ಸಾಧ್ಯವಿಲ್ಲ. ಯಾರಾದರೂ ಬೇರೆ ಧರ್ಮದವರನ್ನು ಮದುವೆಯಾಗಲು ಬಯಸಿದರೆ ಯಾವುದೇ ಕಾನೂನು ಅವರನ್ನು ತಡೆಯಬಲ್ಲದು ಎಂದು ತಾನು ಭಾವಿಸಿಲ್ಲ ಎಂದೂ ಅವರು ತಿಳಿಸಿದರು.

ಬಿಜೆಪಿ ನೇತೃತ್ವದ ಹರ್ಯಾಣ ಸರಕಾರವು ಕಳೆದ ವರ್ಷದ ನವಂಬರ್‌ನಲ್ಲಿ ಬಲವಂತದ ಧಾರ್ಮಿಕ ಮತಾಂತರಗಳ ವಿರುದ್ಧ ಕಾನೂನನ್ನು ರೂಪಿಸಲು ಮೂವರು ಸದಸ್ಯರ ಕರಡು ಸಮಿತಿಯೊಂದನ್ನು ರಚಿಸಿತ್ತು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು ‘ಲವ್ ಜಿಹಾದ್’ ತಡೆಯುವ ನೆಪದಡಿ ಈಗಾಗಲೇ ಅಂತರಧರ್ಮೀಯ ವಿವಾಹಗಳ ವಿರುದ್ಧ ಸುಗ್ರೀವಾಜ್ಞೆಗಳನ್ನು ಹೊರಡಿಸಿವೆ. ಉತ್ತರ ಪ್ರದೇಶದಲ್ಲಿ ಈ ಕಾನೂನಿನಡಿ ಹಲವರನ್ನು ಬಂಧಿಸಲಾಗಿದೆ. ತನ್ನ ಸರಕಾರವು ಶೀಘ್ರವೇ ಬಲವಂತದ ಮತಾಂತರದ ವಿರುದ್ಧ ಕಾನೂನನ್ನು ತರಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಅವರೂ ಕಳೆದ ತಿಂಗಳು ಹೇಳಿದ್ದರು.

 ಆದರೆ,ಕೇಂದ್ರೀಯ ತನಿಖಾ ಸಂಸ್ಥೆಗಳು ಯಾವುದೇ ‘ಲವ್ ಜಿಹಾದ್’ಪ್ರಕರಣಗಳನ್ನು ವರದಿ ಮಾಡಿಲ್ಲ ಎಂದು ಕೇಂದ್ರ ಸರಕಾರವೇ 2019ರಲ್ಲಿ ಲೋಕಸಭೆಯಲ್ಲಿ ತಿಳಿಸಿತ್ತು. ಎನ್‌ಐಎ ಮತ್ತು ಕರ್ನಾಟಕದ ಸಿಐಡಿ ಪೊಲೀಸರು ಈ ಬಗ್ಗೆ ನಡೆಸಿದ ತನಿಖೆಯಲ್ಲಿ ಯಾವುದೇ ಸಾಕ್ಷಾಧಾರಗಳು ಲಭಿಸಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಬಳಿಯೂ ‘ಲವ್ ಜಿಹಾದ್’ ಕುರಿತು ಯಾವುದೇ ಮಾಹಿತಿಗಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News