ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ನೇಮಕಾತಿ: ಅರ್ಹ ಅಭ್ಯರ್ಥಿಗಳಿಗೆ ಉಚಿತ ತರಬೇತಿ; ಜಿ.ಎ.ಬಾವಾ

Update: 2021-03-04 17:28 GMT

ಬೆಂಗಳೂರು, ಮಾ.4: ಪೊಲೀಸ್ ಇಲಾಖೆಯ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ಆಹ್ವಾನಿಸಿರುವ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ನೇಮಕಾತಿ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.

ಗುರುವಾರ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ಮುಂದಾಗಿದೆ. ಹಾಗಾಗಿ, ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳುಗಳಲ್ಲಿ ತರಬೇತಿ ನೀಡುವ ಯೋಜನೆಯೊಂದನ್ನು ರೂಪಿಸಲಾಗಿದ್ದು, ಆಸಕ್ತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅರ್ಹ ಅಭ್ಯರ್ಥಿಗಳಿಗೆ ವಸತಿ ಮತ್ತು ಆಹಾರದೊಂದಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದ ಅವರು, ಮುಸ್ಲಿಮರು ಮಾತ್ರವಲ್ಲದೆ, ಆರ್ಥಿಕವಾಗಿ ದುರ್ಬಲವಾಗಿರುವ ಯಾವುದೇ ಸಮುದಾಯದ ಅಭ್ಯರ್ಥಿಗಳು ಈ ಯೋಜನೆಯ ಉಪಯೋಗ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳಾ ಅಭ್ಯರ್ಥಿಗಳಿಗೂ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ನಗರದ ಕಾಟನ್ ಪೇಟೆಯ ಹಮೀದ್‍ ಷಾ ಬಹುಮಹಡಿ ಸಂಕೀರ್ಣದಲ್ಲಿ ಉಚಿತ ರಕ್ತ ನಿಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದ ಅವರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ತಜ್ಞರನ್ನು ನಾವು ನೇಮಕಾತಿ ಮಾಡುವ ಗುರಿ ಹೊಂದಿದ್ದೇವೆ ಎಂದು ವಿವರಿಸಿದರು.

1976ರಲ್ಲಿ ಹಮೀದ್ ಷಾ ಕಾಂಪ್ಲೆಕ್ಸ್ ನಿರ್ಮಾಣವಾಯಿತು. 2016ರಲ್ಲಿ ಈ ಕಾಂಪ್ಲೆಕ್ಸ್ ನ ಆಡಳಿತ ಸಮಿತಿಯ ಅಧಿಕಾರ ವಹಿಸಿಕೊಂಡ ಬಳಿಕ ನಿಯಮಿತ ಬಾಡಿಗೆ ಸಂಗ್ರಹವನ್ನು ಹೆಚ್ಚು ಮಾಡಲಾಗಿದ್ದು, ಕಾಂಪ್ಲೆಕ್ಸ್ ಆವರಣದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ.
ಅದೇರೀತಿ, ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎ.ಸಿ.ಟೆಕ್ನಾಲಜಿ, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ವೆಲ್ಡಿಂಗ್ ಸೇರಿದಂತೆ ಇನ್ನಿತರೆ ಕೋರ್ಸ್‍ಗಳ ಕುರಿತು ನೂರಾರು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಆವರಣದಲ್ಲಿ ಪುಟ್ಟ ಉದ್ಯಾನವನ, ಹಝ್ರತ್ ಮೊಹಿಬ್ ಷಾ ದರ್ಗಾ ಮುಖ್ಯದ್ವಾರದಲ್ಲಿ ಮಿನಾರ್ ನಿರ್ಮಿಸಲಾಗಿದೆ. ಉಚಿತ ಔಷಧಾಲಯ, ಆವರಣದೊಳಗೆ ಸಿಮೆಂಟ್ ರಸ್ತೆ, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ಎರಡು ಕೊಳವೆ ಬಾವಿ ತೋಡಿಸಲಾಗಿದೆ ಎಂದು ಬಾವಾ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಡಿ.ಮುಲ್ಲಾ, ಆಡಳಿತ ಸಮಿತಿ ಸದಸ್ಯರಾದ ಡಾ. ಇಕ್ಬಾಲ್, ಯಾಕೂಬ್, ಪ್ರೊ.ಯೂಸುಫ್, ರಶೀದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News