ಬೇಡಿಕೆ ಈಡೇರಿಕೆಗೆ ಪಿಂಜಾರ ಸಮುದಾಯ ಪಟ್ಟು

Update: 2021-03-04 17:30 GMT

ಬೆಂಗಳೂರು, ಮಾ.4: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಅಲೆಮಾರಿ ಪಿಂಜಾರ, ನದಾಫ, ಮನ್ಸೂರಿ, ದುದೇಕುಲ ಜನಾಂಗದ ಪ್ರಗತಿಗೆ ರಾಜ್ಯ ಸರಕಾರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ದುದೇಕುಲ ಪಿಂಜಾರಿ ನದಾಫ ಸಂಘ ಹಾಗೂ ರಾಜ್ಯದಲ್ಲಿರುವ ಪಿಂಜಾರ ನದಾಫ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೌರ್ಯ ವೃತ್ತದ ಗಾಂಧಿ ಪ್ರತಿಮೆವರೆಗೂ ಮೆರವಣಿಗೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊಡೇಕಲ್ಲದಾವಲ ಮಲೀಕ್ ದರ್ಗಾದ ಹಝ್ರತ್ ಅಜ್ಜ, ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಅವಶ್ಯವಾಗಿದ್ದು, ಉಳಿದ ಸಮುದಾಯಕ್ಕೆ ನೀಡಿದ ಪ್ರಾಮುಖ್ಯತೆಯನ್ನು ಪಿಂಜಾರ ನದಾಫ ಸಮುದಾಯಕ್ಕೂ ನೀಡಿ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪಿಂಜಾರ್ ನದಾಫ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಝಾಕ್ ನದಾಫ್ ಮಾತನಾಡಿ, ಸುಮಾರು 38 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಿಂಜಾರ, ನದಾಫ್ ಸಮುದಾಯ ಹತ್ತಿಯಿಂದ ಗಾದಿ, ಗುಡಾರ, ಹಗ್ಗ ತಯಾರಿಸುವ ವಿಶಿಷ್ಟ ಉತ್ಪಾದನಾ ಚಟುವಟಿಕೆಯ ಮೂಲಕ ಆರ್ಥಿಕ ಲಕ್ಷಣಗಳನ್ನುಳಗೊಂಡಿದೆ. ಸಾಂಸ್ಕಂತಿಕವಾಗಿಯೂ ಶತಮಾನಗಳ ಚಾರಿತ್ರಿಕ ಅನುಭವ ಇರುವ ಈ ಸಮಾಜ ಇಂದು ಅತ್ಯಂತ ಹಿಂದುಳಿದಿರುವುದು ದುರದೃಷ್ಟಕರ. ರಾಜ್ಯದ ವಿವಿಧೆಡೆ ಹರಿದು-ಹಂಚಿಹೋಗಿರುವ ಈ ಸಮುದಾಯಕ್ಕೆ ಉದ್ಯೋಗವೂ ಇಲ್ಲ, ಆಹಾರ ಭದ್ರತೆಯೂ ಇಲ್ಲದೆ, ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರು 2010ನೆ ಸಾಲಿನಲ್ಲಿ ಸಲ್ಲಿಸಿದ ವರದಿಯಲ್ಲಿ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತು ನೀಡಲಾಗಿದೆ. ಆದರೆ, ಅಲೆಮಾರಿ ಪಿಂಜಾರ, ನದಾಫ್, ಮನ್ಸೂರಿ, ದುದೇಕುಲ ಜನಸಂಖ್ಯೆಗೆ ಸದ್ಯ ಪ್ರವರ್ಗ 1ಕ್ಕೆ ಮೀಸಲಾತಿ ಸೌಲಭ್ಯಗಳು ಕಲ್ಪಿಸಬೇಕೆಂದು ಸರಕಾರಿ ಆದೇಶವಿದ್ದರೂ ಎಲ್ಲ ಜಿಲ್ಲೆಯಲ್ಲಿ ಜಾರಿಗೆ ಬಂದಿಲ್ಲ ಎಂದು ಅವರು ಆರೋಪಿಸಿದರು.

ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿರುವುದರಿಂದ ರಾಜ್ಯದಲ್ಲಿ ಈ ಜನಾಂಗದವರಿಗೆ ಪ್ರವರ್ಗ 1 ಮೀಸಲಾತಿ ನೀಡಲು ತಾಲ್ಲೂಕು ದಂಡಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದ ಅವರು, ಸಮುದಾಯದ ಏಳಿಗೆಗೆ ರಾಜ್ಯ ಸರಕಾರ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ದುದೇಕುಲ ಪಿಂಜಾರಿ ನದಾಫ ಸಂಘದ ರಾಜ್ಯಾಧ್ಯಕ್ಷ ಹೊನ್ನೂರಸಾಬ, ಅಲಿಫೀರಾ, ದಸ್ತಾಗೀರ ಮುಲ್ಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News