ಸಚಿವ ಸುಧಾಕರ್ ಅಣತಿಯಂತೆ ಆಪ್ತ ಕಂಪೆನಿಗಳಿಗೆ ಗುತ್ತಿಗೆ ನೀಡಿದ ಅಧಿಕಾರಿಗಳು: ಆಮ್ ಆದ್ಮಿ ಪಕ್ಷದ ಆರೋಪ

Update: 2021-03-04 18:00 GMT

ಬೆಂಗಳೂರು, ಮಾ.4: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಆಪ್ತವಾಗಿರುವ ಎರಡು ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್, ವೇರ್‍ಹೌಸಿಂಗ್ ಸೊಸೈಟಿಯ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಮರು ಟೆಂಡರ್ ಕರೆದು ಸರಕಾರದ ಬೊಕ್ಕಸದಿಂದ 80 ಕೋಟಿ ರೂ.ಗಳಷ್ಟು ಹಣ ಲಪಟಾಯಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.

ನಗರದ ಪ್ರೆಸ್ ಕ್ಲಬ್‍ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದ ಸೆ.23ರಂದು ರಾಜ್ಯದ ಆಯ್ದ ಸರಕಾರಿ ಪ್ರಯೋಗಾಲಯಗಳಿಗೆ ಎರಡು ಬಗೆಯ ಬಯೋಕೆಮಿಸ್ಟ್ರಿ ಮತ್ತು ಎರಡು ಬಗೆಯ ಹೆಮಟಾಲಜಿ ಒಟ್ಟು ನಾಲ್ಕು ಬಗೆಯ ಸಾಧನಗಳನ್ನು ವಿತರಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಚಿವರ ಒತ್ತಡಕ್ಕೆ ಮಣಿದು "ಅಗಪೆ ಮತ್ತು ಸಿಸ್ ಮ್ಯಾಕ್ಸ್" ಎನ್ನುವ ಎರಡು ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಸಹ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.

ಅಗಪೆ ಕಂಪೆನಿ ಬಯೋ ಕೆಮಿಸ್ಟ್ರಿ ಸಂಬಂಧಿತ ಎರಡು ಉಪಕರಣಗಳನ್ನು ಪೂರೈಸಿದರೆ ಸಿಸ್ ಮ್ಯಾಕ್ಸ್ ಹೆಮಟಾಲಜಿ (ರಕ್ತಶಾಸ್ತ್ರ) ಎರಡು ಉಪಕರಣಗಳನ್ನು ಪೂರೈಸಿದೆ. ಇದೇ ರೀತಿಯ ಇನ್ನೂ ಉತ್ತಮ ಗುಣಮಟ್ಟದ, ಮುಂದುವರೆದ ಉಪಕರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಸುವುದಾಗಿ ತಿಳಿಸಿದ್ದ ಅನೇಕ ಕಂಪೆನಿಗಳ ಪ್ರಸ್ತಾವನೆಯನ್ನೇ ತಿರಸ್ಕರಿಸಿ ಅನುಭವವಿಲ್ಲದ ಎರಡು ಕಂಪೆನಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು "ಮುಂಬೈ ಮೂಲದ ಟ್ರಾನ್ಸಿಯಾ ಕಂಪೆನಿ" ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬರೆದಿರುವ ದೂರಿನ ಪ್ರತಿಯಲ್ಲಿ ತಿಳಿಸಲಾಗಿದೆ ಎಂದು ಅವರು ದಾಖಲೆ ಬಿಡುಗಡೆ ಮಾಡಿದರು.

ಕೇರಳ ಮೂಲದ ಅಗಪೆ ಎನ್ನುವ ಕಂಪೆನಿ 2018-19 ರಲ್ಲಿ ರದ್ದುಗೊಂಡ ಟೆಂಡರ್ ಪ್ರಕ್ರಿಯೆಯಲ್ಲೂ ಭಾಗವಹಿಸಿತ್ತು. ಇದೇ ಕಂಪೆನಿ ಪ್ರಸ್ತುತ ಪೂರೈಸಿರುವ 1201 "ಸೆಮಿ ಆಟೋ ಬಯೋ ಕೆಮಿಸ್ಟ್ರಿ ಅನಲೈಜರ್" ಸಾಧನಕ್ಕೆ 59,900 ರೂಪಾಯಿ ನಮೂದಿಸಿತ್ತು, ಇದೇ ಸಾಧನವನ್ನು ಕೇರಳ ಆರೋಗ್ಯ ಇಲಾಖೆಗೆ 55,460 ರೂಪಾಯಿಗೆ ಪೂರೈಸಿದೆ. ಪ್ರಸ್ತುತ ಅಗಪೆ ಕಂಪೆನಿಯಿಂದ ಹೆಚ್ಚುವರಿ ಹಣ ಕೊಟ್ಟು 86 ಸಾವಿರ ರೂ.ಗಳಿಗೆ ಖರೀದಿಸಲಾಗಿದೆ ಎಂದು ಅವರು ಆರೋಪಿಸಿದರು. 

ಇದೇ ಕಂಪೆನಿಯಿಂದ 171 "ಫುಲ್ ಆಟೋಮೆಟೆಡ್ ಬಯೋಕೆಮಿಸ್ಟ್ರಿ ಅನಲೈಜರ್" ಸಾಧನವನ್ನು 9,90,000 ರೂ.ಗಳಿಗೆ ಖರೀದಿಸಲಾಗಿದೆ. ಈ ಸಾಧನಕ್ಕೆ ಮೈಂಡ್ರೇ ಎನ್ನುವ ಕಂಪೆನಿ 5 ಲಕ್ಷ ರೂಪಾಯಿ ನಮೂದಿಸಿದ್ದರು ಏಕೆ ಟೆಂಡರ್ ರದ್ದುಗೊಳಿಸಲಾಯಿತು ಎನ್ನುವುದೇ ಯಕ್ಷ ಪ್ರಶ್ನೆ ಎಂದು ಅವರು ಹೇಳಿದರು.

"ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್" (ರಕ್ತ ವಿಜ್ಞಾನ ಸಾಧನ) ಎರಡು ರೀತಿಯ ಸಾಧನಗಳನ್ನು ಪೂರೈಸಿರುವ ಸಿಸ್‍ಮೆಕ್ಸ್ ಎನ್ನುವ ಕಂಪೆನಿ 2018-19ರ ಟೆಂಡರ್‍ನಲ್ಲಿ ಭಾಗವಹಿಸಿದ್ದಾಗ ಕ್ರಮವಾಗಿ 1,53,000 ರೂ. ಹಾಗೂ 4,60,200 ರೂಪಾಯಿಗಳನ್ನು ನಮೂದಿಸಿತ್ತು. ಪ್ರಸ್ತುತ ಪೂರೈಸಿರುವ ಸಾಧನಗಳಿಗೆ ಎರಡು ಪಟ್ಟು ಬೆಲೆ ನಿಗದಿ ಮಾಡಿ ಪೂರೈಕೆ ಮಾಡಿದೆ ಎಂದು ಮೋಹನ್ ದಾಸರಿ ದೂರಿದರು.

ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಮಾತನಾಡಿ, ಸಿಸ್‍ಮ್ಯಾಕ್ಸ್ ಕಂಪೆನಿ ಪೂರೈಸಿರುವ ಸಾಧನದಲ್ಲಿ ರಕ್ತ ಪರೀಕ್ಷೆ ನಡೆಸಲು 38 ರೂಪಾಯಿ ಖರ್ಚಾಗುತ್ತದೆ. ಬೇರೆ ಕಂಪೆನಿಗಳ ಸಾಧನದಲ್ಲಿ 23-25 ರೂಪಾಯಿ ಖರ್ಚಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅಲ್ಲದೇ ಈ ಸಿಸ್‍ಮ್ಯಾಕ್ಸ್ ಕಂಪೆನಿಗೆ ಈ ರೀತಿಯ ಸಾಧನಗಳನ್ನು ಪೂರೈಸಿರುವ ಅನುಭವವೇ ಇಲ್ಲ. ಈ ಕಂಪೆನಿ ಪೂರೈಸಿರುವ ಸಾಧನ ಬಳಸಿದಷ್ಟು ಸರಕಾರಕ್ಕೆ ನಷ್ಟ ಎಂದರು.

ಇಲ್ಲಿ ನೇರಾನೇರವಾಗಿ ಸರಕಾರ ಸುಮಾರು 40 ಕೋಟಿ ರೂ.ಗಳಷ್ಟು ಹೆಚ್ಚುವರಿ ಹಣ ಪಾವತಿ ಮಾಡುತ್ತಿದೆ. ನಾಲ್ಕು ವಿಧಾನದ ಸಾಧನಗಳು ಸೇರಿ ಸುಮಾರು 80 ಕೋಟಿ ರೂ.ಹಗರಣ ನಡೆದಿದೆ. ಆರೋಗ್ಯ ಸಚಿವ ಸುಧಾಕರ್ ಅವರೇ ನಿಮ್ಮ ಜೇಬಿಗೆ ಎಷ್ಟು ಬಂದು ಬಿದ್ದಿದೆ. ಇಷ್ಟು ದೊಡ್ಡ ಮೊತ್ತವನ್ನು ಸ್ವಾಹ ನಿಮ್ಮ ಅಣತಿಯಂತೆ ನಡೆದಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News