ಆಂಗ್ಲರಿಗೆ ಮತ್ತೆ ಅಕ್ಷರ್-ಅಶ್ವಿನ್ ಪ್ರಹಾರ

Update: 2021-03-05 05:05 GMT

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ದಾಳಿಗೆ ಸಿಲುಕಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 75.5 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟಾಗಿದೆ. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದಂತ್ಯಕ್ಕೆ 12 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 24ರನ್ ಗಳಿಸಿದೆ.

ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಅವರು ಖಾತೆ ತೆರೆಯುವ ಮೊದಲೇ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ.

ರೋಹಿತ್ ಶರ್ಮಾ ಔಟಾಗದೆ 8 ರನ್ ಮತ್ತು ಚೇತೇಶ್ವರ ಪೂಜಾರ ಔಟಾಗದೆ 15 ರನ್ ಗಳಿಸಿ ಬ್ಯಾಟಿಂಗ್‌ನ್ನು ಎರಡನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

 ಇದೇ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯ 2 ದಿನದಲ್ಲಿ ಮುಗಿದಿತ್ತು. ಇಂಗ್ಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (26-7-68-4), ರವಿಚಂದ್ರನ್ ಅಶ್ವಿನ್ (19.5-4-47-3) ಮತ್ತು ವಾಶಿಂಗ್ಟನ್ ಸುಂದರ್ (7-1-14-1) ಮೊತ್ತೊಮ್ಮೆ ಅದೇ ರೀತಿಯ ಪ್ರಹಾರ ನಡೆಸಿದರು. ಇವರೊಂದಿಗೆ ಯುವ ವೇಗಿ ಮುಹಮ್ಮದ್ ಸಿರಾಜ್ (14-2-45-2) ದಾಳಿ ಮುಂದುವರಿಸಿ ಇಂಗ್ಲೆಂಡ್‌ನ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

 ಬೆನ್ ಸ್ಟೋಕ್ಸ್ 55 ರನ್(55) ಗಳಿಸಿರುವುದು ಇಂಗ್ಲೆಂಡ್ ತಂಡದ ಪರ ದಾಖಲಾಗಿರುವ ಗರಿಷ್ಠ ಸ್ಕೋರ್ ಆಗಿದೆ. ಅವರ ಬಳಿಕ ಡಾನ್ ಲಾರೆನ್ಸ್ 46ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ತಂಡದ ಸಹ ಆಟಗಾರರಿಂದ ದೊಡ್ಡ ಕೊಡುಗೆ ಸಿಗಲಿಲ್ಲ.

12.1 ಓವರ್‌ಗಳಲ್ಲಿ 30ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ 4ನೇ ವಿಕೆಟ್‌ಗೆ ಬೈರ್‌ಸ್ಟೋವ್ ಮತ್ತು ಬೆನ್‌ಸ್ಟೋಕ್ಸ್ 48 ರನ್, 5ನೇ ವಿಕೆಟ್‌ಗೆ ಸ್ಟೋಕ್ಸ್ ಮತ್ತು ಒಲ್ಲಿ ಪೋಪ್ 43 ರನ್ ಹಾಗೂ ಆರನೇ ವಿಕೆಟ್‌ಗೆ ಲಾರೆನ್ಸ್ ಮತ್ತು ಒಲ್ಲಿ ಪೋಪ್ 45 ರನ್‌ಗಳ ಜೊತೆಯಾಟ ನೀಡಿದರು. ಇದರಿಂದಾಗಿ 46.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 166ರನ್ ಗಳಿಸಿತು. ಬಳಿಕ 39 ರನ್ ಸೇರುವಷ್ಟರಲ್ಲಿ ಇಂಗ್ಲೆಂಡ್‌ನ ಇನಿಂಗ್ಸ್ ಮುಕ್ತ್ತಾಯಗೊಂಡಿತು. ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳನ್ನು ಸೇರಿಸಿಕೊಂಡಿದ್ದ ಇಂಗ್ಲೆಂಡ್‌ಗೆ ಮೊದಲ ದಿನ ದೊಡ್ಡ ಲಾಭವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News