ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆ

Update: 2021-03-05 09:20 GMT

ಕೋಲ್ಕತಾ: ಮಾ.27ರಿಂದ ಆರಂಭವಾಗಲಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಮಮತಾ ಬ್ಯಾನರ್ಜಿ ಶುಕ್ರವಾರ ಘೋಷಿಸಿದ್ದಾರೆ. ತಾನು ಸ್ಪರ್ಧಿಸುತ್ತಿದ್ದ ಕೋಲ್ಕತಾದ ಭವಾನಿಪುರ ಕ್ಷೇತ್ರವನ್ನು ತೆರವುಗೊಳಿಸಿದ್ದಾರೆ.

ಭಾರೀ ಪೈಪೋಟಿಯಿಂದ ಕೂಡಿರುವ ವಿಧಾನಸಭಾ ಚುನಾವಣೆ ಮುಂಚಿತವಾಗಿ ತೃಣಮೂಲ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಪಕ್ಷಾಂತರವಾಗಿರುವ ಓರ್ವ ಪ್ರಮುಖ ನಾಯಕ ಸುವೇಂದು ಅಧಿಕಾರಿ ಅವರ ಪ್ರಾಬಲ್ಯವಿರುವ ಕ್ಷೇತ್ರ ನಂದಿಗ್ರಾಮ. ಮಮತಾ ಅವರ ಸ್ಪರ್ಧೆಯಿಂದ ನಂದಿಗ್ರಾಮ ಇಡೀ ದೇಶ ಗಮನ ಸೆಳೆಯಲಿದ್ದು,ಬಿಜೆಪಿಯಿಂದ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ತಾನು ಈ ತನಕ ಸ್ಪರ್ಧಿಸುತ್ತಿದ್ದ ಭವಾನಿಪುರದಿಂದ ಈ ಬಾರಿ ಇಂಧನ ಸಚಿವ ಸೋವನ್ ದೇಬ್ ಚಟ್ಟೋಪಾಧ್ಯಾಯ ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಪ್ರಕಟಿಸಿದರು. ಈ ಮೂಲಕ ಎರಡು ಕ್ಷೇತ್ರಗಳಲ್ಲಿ ಮಮತಾ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ತೆರೆ ಎಳೆದರು.

ಮಮತಾ ಅವರು ಒಟ್ಟು 294 ಕ್ಷೇತ್ರಗಳ ಪೈಕಿ 291 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಘೋಷಿಸಿದ್ದಾರೆ.  ಮೂರು ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದ್ದಾರೆ. 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ತೃಣಮೂಲ ಕಾಂಗ್ರೆಸ್ ನಿಂದ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು.

ತೃಣಮೂಲ ಕಾಂಗ್ರೆಸ್ 50 ಮಹಿಳೆಯರು, 42 ಮುಸ್ಲಿಂ ಅಭ್ಯರ್ಥಿಗಳು, 79 ಎಸ್ ಸಿ ಅಭ್ಯರ್ಥಿಗಳು ಹಾಗೂ 17 ಎಸ್ ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News