ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2021-03-05 14:31 GMT

ಬೆಂಗಳೂರು, ಮಾ.5: ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ವಿವಿ ಹುದ್ದೆಗಳ ಮಹತ್ವ ಹಿನ್ನೆಲೆಯಲ್ಲಿ ಅವುಗಳ ಭರ್ತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶೇಷ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು.

ಬೆಂಗಳೂರು, ಧಾರವಾಡ, ರಾಯಚೂರು ಕೃಷಿ ವಿವಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿವಿಯಲ್ಲಿ 233 ಬೋಧಕ, 997 ಬೋಧಕೇತರ ಹುದ್ದೆಗಳು, ಧಾರವಾಡದ ಕೃಷಿ ವಿವಿಯಲ್ಲಿ 228 ಬೋಧಕ, 655 ಬೋಧಕೇತರ ಹುದ್ದೆಗಳು, ರಾಯಚೂರಿನ ವಿವಿಯಲ್ಲಿ 228 ಬೋಧಕ, 533 ಬೋಧಕೇತರ ಹುದ್ದೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ 184 ಬೋಧಕ, 404 ಬೋಧಕೇತರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪ್ರಸ್ತುತ ಅಗತ್ಯವಿರುವ ಮತ್ತು ಅಗತ್ಯಕ್ಕೆ ತಕ್ಕ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಡಿ. ಹುದ್ದೆಗಳ ಭರ್ತಿಗೆ ಅನುಮತಿ ಪಡೆದು ತನ್ನಿ. ಈ ಹುದ್ದೆಗಳನ್ನು ಯಾವ ಕಾಲ ಮಿತಿಯೊಳಗೆ ಭರ್ತಿ ಮಾಡುತ್ತೀರಿ ಎನ್ನುವುದನ್ನು ಸದಸ್ಯರಿಗೆ ತಿಳಿಸಿ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್, ಈ ಹಿಂದೆ ನೇಮಕ ಮಾಡಿಕೊಳ್ಳಲು ಆಗಿದ್ದ ಆದೇಶದ ಪ್ರತಿ ಈಗಷ್ಟೇ ಸಿಕ್ಕಿದೆ. ಇದನ್ನು ಪರಿಶೀಲಿಸಲಾಗುವುದು ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News