ಮಾದಕ ವಸ್ತುಗಳ ವಿರುದ್ಧ ಬೆಂಗಳೂರು ಪೊಲೀಸರ ಕಾರ್ಯಾಚರಣೆ: 4 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

Update: 2021-03-05 15:08 GMT

ಬೆಂಗಳೂರು, ಮಾ.5: ಮಾದಕ ವಸ್ತುಗಳ ಸರಬರಾಜು ಹಾಗೂ ಮಾರಾಟದ ಮೇಲೆ ತೀವ್ರ ನಿಗಾವಹಿಸಿರುವ ನಗರದ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ 4 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಇಲ್ಲಿನ ಪೂರ್ವ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತುಗಳ ಸರಬರಾಜು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಜತೆಗೆ, ಅವರಿಗೆ ಮನೆ ಬಾಡಿಗೆ ನೀಡುತ್ತಿದ್ದ ಮಾಲಕರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ ಎಂದುಅವರು ತಿಳಿಸಿದರು.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ 7 ಮಂದಿ ವಿದೇಶಿ ಪ್ರಜೆಗಳಿಂದ 42.5 ಕೆಜಿ ಗಾಂಜಾ, 200 ಗ್ರಾಂ ಎಕ್ಸಟೆನ್ಸಿ ಮಾತ್ರೆಗಳು, 2719 ಗ್ರಾಂ ಕೊಕೇನ್, ಎಸ್‍ಎಲ್‍ಡಿ ಮಾತ್ರೆಗಳು ಸೇರಿದಂತೆ 4 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹ್ಯಾರಿಸನ್ ಅಗಭಂಟಿ (25) ಹಾಗೂ ಜಾನ್‍ನ್ಯಾನ್ಸೊ(30)ನನ್ನು ಬಂಧಿಸಿ 82 ಗ್ರಾಂ ಎಕ್ಸಟೆನ್ಸಿ ಮಾತ್ರೆ, ಕೊಕೇನ್, ಇನ್ನಿತರ ಡ್ರಗ್ಸ್, 7 ಮೊಬೈಲ್, 2 ಬೈಕ್ ಸೇರಿ 20 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಂಧಿತ ಆರೋಪಿಗಳ ಜತೆ ನೈಜೀರಿಯಾ ದೇಶದ ಪ್ರಜೆಗಳಾದ ಮೂಸಾ ಹಾಗೂ ಇಮಾನ್ಯುಯಲ್ ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳಿಂದ ಕಾರಿನಲ್ಲಿದ್ದ 200 ಗ್ರಾಂ ಕೊಕೇನ್, ಎಂಡಿಎಂಎ ಸೇರಿ 3.5 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದುಅವರು ತಿಳಿಸಿದರು.

ವಿಚಾರಣೆ ವೇಳೆ ಮುಖ್ಯ ಡ್ರಗ್ಸ್ ಫೆಡ್ಲರ್ ಜಾನ್‍ನ ವಿಚಾರಣೆ ಹಾಗೂ ತಾಂತ್ರಿಕ ತನಿಖೆಯಿಂದ ಆರೋಪಿಯ ಜತೆ ನಿಕಟ ಸಂಪರ್ಕ ಹೊಂದಿದ್ದ ಬಿಗ್‍ಬಾಸ್ ಸ್ಪರ್ಧಿ ಮಸ್ತಾನ್‍ ಚಂದ್ರ ಹಾಗೂ ಕೇಶವ ಎಂಬುವರ ಮನೆಗಳ ಮೇಲೆ ಶೋಧ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ವಿದೇಶಿ ಪ್ರಜೆಗಳು ಹಾಗೂ ಸ್ಥಳೀಯನೊಬ್ಬನನ್ನು ಬಂಧಿಸಿ 1 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನೈಜೀರಿಯಾ ಹಾಗೂ ಉಗಾಂಡ ಮೂಲದ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ನಗರದಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಅಕ್ರಮ ಸಂಪಾದನೆ ಮಾಡುತ್ತಿದ್ದರು ಎಂದು ಆಯುಕ್ತರು ತಿಳಿಸಿದರು.

ಬಾಣಸವಾಡಿ ಪೊಲೀಸರು ಜ್ಯೋತಿ ಸ್ಕೂಲ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೆಜಿ ಹಳ್ಳಿಯ ರಿಝ್ವಾನ್(34)ನನ್ನು ಬಂಧಿಸಿ 45 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ, ವೀಸಾ ದುರ್ಬಳಕೆ ಬಂಧಿತ ಆರೋಪಿಗಳಾದ ಜಾನ್‍ ಫೆಡ್ಲರ್ ಹಾಗೂ ಜಾನ್‍ನ್ಯಾನ್ಸೊ ಎಂಬವರು ಅಕ್ರಮವಾಗಿ ನೆಲಸಿ ಡ್ರಗ್ಸ್ ಸಾಗಣೆಯಲ್ಲಿ ತೊಡಗಿದ್ದರು ಎಂದರು.

ಆರೋಪಿಗಳ ಪಾಸ್‍ಪೋರ್ಟ್, ವೀಸಾ, ದಾಖಲಾತಿಗಳನ್ನು ಪರಿಶೀಲಿಸದೆ ಮನೆ ಬಾಡಿಗೆ ನೀಡಿದ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಮಲ್ ಪಂತ್ ತಿಳಿಸಿದರು.

ಆರೋಪಿಗಳನ್ನು ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ, ಬಾಣಸವಾಡಿ ಉಪವಿಭಾಗದ ಎಸಿಪಿ ಸಕ್ರಿ ನೇತೃತ್ವದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಂಡಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್ ನಗದು ಬಹುಮಾನ ಘೋಷಿಸಿದರು.

ಮಸ್ತಾನ್‍ ಚಂದ್ರ ಮನೆ ಮೇಲೆ ದಾಳಿ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಮಸ್ತಾನ್‍ ಚಂದ್ರನ ಮನೆ ಮೇಲೆ ಮಾದಕ ವಸ್ತುಗಳ ಸರಬರಾಜು ಆರೋಪ ಸಂಬಂಧ ಗೋವಿಂದಪುರ ಠಾಣಾ ಪೊಲೀಸರು ದಾಳಿ ನಡೆಸಿ, ಪರಿಶೀಲಿಸಿದರು.

ಶುಕ್ರವಾರ ಬೆಳಗ್ಗೆ ಬಾಣಸವಾಡಿ ಉಪವಿಭಾಗದ ಎಸಿಪಿ ಸಕ್ರಿ ನೇತೃತ್ವದ ತಂಡ ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News