ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

Update: 2021-03-05 15:22 GMT

ಬೆಂಗಳೂರು, ಮಾ.5: ಕೃಷಿ ಇಲಾಖೆಯ ರಾಯಭಾರಿಯಾಗಲು ನಟ ದರ್ಶನ್ ಯಾವುದೇ ಸಂಭಾವನೆ ಇಲ್ಲದೇ ಒಪ್ಪಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ "ಕೃಷಿ ಕಾಯಕದ ರಾಯಭಾರಿ" ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದರ್ಶನ್ ಅವರು ಚಿತ್ರರಂಗ, ನಟನೆ ಮಾತ್ರವಲ್ಲದೆ, ತೋಟಗಾರಿಕೆ ರೈತಾಪಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ರೈತರ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯ ಮಾತ್ರವಲ್ಲದೆ, ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮ. ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ, ಪಶುಸಂಗೋಪನೆ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದು ನುಡಿದರು.

ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿದ್ದಾರೆ. ಇದು ಅವರಲ್ಲಿರುವ ಕೃಷಿ ಉತ್ಸಾಹ, ರೈತ ಪರ ಕಾಳಜಿಯನ್ನು ತೋರಿಸುತ್ತದೆ. ಆದರೆ, ಸೂಪರ್ ಸ್ಟಾರ್ ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪನಿಯ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ ಎಂದ ಅವರು, ದರ್ಶನ್‍ಗೆ ರೈತರ ಪರ ಕಳಕಳಿ ಇದೆ. ದರ್ಶನ್ ಅವರ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ ಎಂದೂ ಹೇಳಿದರು.

ನಟ ದರ್ಶನ್ ಮಾತನಾಡಿ, ನಾನು ಸರಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳಿಗೆ ಪ್ರಚಾರ ನೀಡುತ್ತೇನೆ. ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ. ಇದಕ್ಕೆ ನಾನು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ‘ಕೃಷಿ ಕೈಪಿಡಿ-2021' ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News