ಕೇಂದ್ರ ಸರಕಾರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಲಿ: ಯೋಗೇಂದ್ರ ಯಾದವ್

Update: 2021-03-05 15:24 GMT

ಕಲಬುರಗಿ, ಮಾ.5: ಕೇಂದ್ರ ಸರಕಾರ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನು ರೂಪಿಸಬೇಕೆಂಬುದು ದೇಶದ ರೈತ ಸಮುದಾಯದ ಒಕ್ಕೊರಲ ಬೇಡಿಕೆಯಾಗಿದೆ ಎಂದು ರೈತ ಹೋರಾಟಗಾರ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನಗರದ ಎಪಿಎಂಸಿ ಗಂಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಂಬಲ ಬೆಲೆ ಕೊಡಿ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಯೆಂದು ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯನ್ನು ಕೇಳುತ್ತಿದ್ದಾರೆ. ಆದರೆ, ಅವರು ಕಾಂಗ್ರೆಸ್‍ನತ್ತ ಬೊಟ್ಟು ಮಾಡುತ್ತಿದ್ದಾರೆ. ಇವೆಲ್ಲವನ್ನು ಕಾಂಗ್ರೆಸ್ ಮಾಡಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಈಗ ನೀವು ಅಧಿಕಾರಿದಲ್ಲಿದ್ದಾರೆ, ಬೆಂಬಲ ಬೆಲೆಯನ್ನು ಜಾರಿಗೊಳಿಸಿಯೆಂದು ಒತ್ತಾಯಿಸಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಮಂತ್ರಿ ಆಗುವುದಕ್ಕೂ ಮೊದಲು ಲೋಕಸಭಾ ಚುನಾವಣೆ ಸಂದರ್ಭಗಳಲ್ಲಿ ನೂರಾರು ಸಭೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದನಂತರ ಸ್ವಾಮಿನಾಥನ್ ವರದಿ ಸಂಬಂಧ ಸುಳ್ಳು ಹೇಳುತ್ತಾ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ದೇಶದ ಜನತೆಗೆ ಕನಿಷ್ಠ ಬೆಂಬಲ ಬೆಲೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲ ಆಂದೋಲನ ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾಗೆ ನೋಡಿದರೆ ಕೇಂದ್ರ ಸರಕಾರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಹಾಗೂ ಈ ಬೆಲೆಯನ್ನು ಸಹ ರೈತರಿಗೆ ನೀಡಲು ವಿಫಲವಾಗಿದೆ. ಆದರೂ ನಾನು ರೈತರಿಗೆ ತುಂಬಾ ಉಪಕಾರ ಮಾಡುತ್ತಿದ್ದೇನೆಂದು ಸುಳ್ಳು ಹೇಳುತ್ತಿರುವ ಬಿಜೆಪಿ ನಾಯಕರ ಕುರಿತು, ವಾಸ್ತವ ಸತ್ಯ ಸಂಗತಿಗಳನ್ನು ತಿಳಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಕೆಪಿಆರ್‍ಎಸ್‍ನ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ರಾಜ್ಯ ರೈತ ಸಂಘದ ನಾಗೇಂದ್ರ ಬಡಗಲಪುರ, ಆರ್‍ಕೆಎಸ್ ರಾಜ್ಯ ಸಮಿತಿಯ ಎಚ್.ವಿ.ದಿವಾಕರ್, ಡಾ.ಕೆ.ನೀಲಾ, ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ, ಎಐಕೆಎಸ್‍ನ ಮೌಲಾಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News