ದೇಶದ ಅಧೋಗತಿಗೆ ಕಾಂಗ್ರೆಸ್ ಕಾರಣ: ಬಿಜೆಪಿ ಶಾಸಕ ಪಿ.ರಾಜೀವ್

Update: 2021-03-05 15:58 GMT

ಬೆಂಗಳೂರು, ಮಾ.5: ದೇಶ ಇವತ್ತು ಅಧೋಗತಿಗೆ ಹೋಗಿರುವುದಕ್ಕೆ ಕಾಂಗ್ರೆಸ್ ಕಾರಣ. ಇಡೀ ದೇಶದ ಅಭಿವೃದ್ಧಿಯನ್ನು ಕಾಂಗ್ರೆಸ್ ಎಂದೂ ಬಯಸಿಲ್ಲ. ಈ ದೇಶದಲ್ಲಿ ಬಡವರು ಇರಬೇಕು. ಭ್ರಷ್ಟಾಚಾರ ಇರಬೇಕು ಇದು ಕಾಂಗ್ರೆಸ್ ಪಕ್ಷದ ಮೂಲ ಧೋರಣೆ ಎಂದು ಬಿಜೆಪಿ ಸದಸ್ಯ ಪಿ.ರಾಜೀವ್ ಆರೋಪಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದ ಪ್ರಧಾನಿ ಒಂದು ದೇಶ, ಒಂದು ಚುನಾವಣೆ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಅನ್ನೋದನ್ನು ಇಡೀ ದೇಶದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಚುನಾವಣೆಗಾಗಿ ಎಷ್ಟು ಹಣ ವ್ಯಯಿಸುತ್ತಿದ್ದೇವೆ. ಎಷ್ಟು ಸಂಪನ್ಮೂಲ ವ್ಯಯಿಸುತ್ತಿದ್ದೇವೆ. ಎಷ್ಟು ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ವ್ಯಯವಾಗುತ್ತಿದೆ. 365 ದಿನಗಳ ಒಂದು ಕ್ಯಾಲೆಂಡರ್ ವರ್ಷದಲ್ಲಿ 52 ರವಿವಾರಗಳು ಇವೆ. 24 ಎರಡನೇ ಶನಿವಾರ ಬರುತ್ತೆ. ಹಬ್ಬ ಹರಿದಿನಗಳಿಗಾಗಿ 27 ದಿನ ರಜೆ, 15 ಗಳಿಕೆ ರಜೆಗಳನ್ನು ಸರಕಾರಿ ಅಧಿಕಾರಿಗಳಿಗೆ ನೀಡುತ್ತೇವೆ. ಪ್ರತಿ ವರ್ಷ, ಪ್ರತಿ ಆರು ತಿಂಗಳಿಗೆ ಎರಡು, ಮೂರು, ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ ಯಾವ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಒಂದು ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯಾದರೆ ಮೂರು ತಿಂಗಳವರೆಗೆ ಸರಕಾರಿ ಕಚೇರಿಗಳನ್ನು ನೀತಿ ಸಂಹಿತೆಯ ಹೆಸರಿನಲ್ಲಿ ನಾವು ಮುಚ್ಚಿ ಹಾಕುತ್ತೇವೆ. ಎಲ್ಲಾ ಕೆಲಸಗಳನ್ನು ನಾವು ನಿಲ್ಲಿಸುತ್ತೇವೆ. ಅಧಿಕಾರಿಗಳೆಲ್ಲ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಅಂದರೆ ಭಾರತದ ರಾಜಕೀಯ ಆಗಿಹೋಗಿದೆ ಎಂದು ರಾಜೀವ್ ಹೇಳಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಇವತ್ತಿನ ಈ ದೇಶದ ಅತ್ಯಂತ ಅಗತ್ಯ ಎಂಬುದನ್ನು ಈ ದೇಶದ 130 ಕೋಟಿ ಜನ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ನವರಿಗೆ ಇದು ಅರ್ಥವಾಗಿಲ್ಲ. ಕಾಂಗ್ರೆಸ್ ನವರಿಗೆ ಈ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಹಾಗಾಗಿ, ಸದನದ ಬಾವಿಗಿಳಿದು ಕಾಂಗ್ರೇಸ್ಸಿಗರು ಕೂಗಾಡುತ್ತಿದ್ದಾರೆ ಅನ್ನೋದನ್ನ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.

ಚರ್ಚೆ ಮುಂದುವರಿಸೋಣ: ಸ್ಪೀಕರ್

ಕಾಂಗ್ರೆಸ್ ಸದಸ್ಯರ ಮನವೊಲಿಸುವ ವಿಶ್ವಾಸವಿದೆ. ಮಾ.8ರಂದು ಬಜೆಟ್ ಮಂಡನೆಯಾಗುತ್ತದೆ. 31ರವರೆಗೆ ಬಜೆಟ್ ಚರ್ಚೆಯ ವಿಷಯವಿದೆ. ಅದರ ನಡುವೆ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವನ್ನು ಚರ್ಚೆ ಮಾಡೋಣ. ರಾಜ್ಯದ ವಿಧಾನಸಭೆ ಗಂಭೀರವಾಗಿ ಇದನ್ನು ಚರ್ಚೆ ಮಾಡಿ, ಇದರ ಫಲಶ್ರುತಿಯನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರರಾಗೋಣ.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News