‘ಹೊಸ ಧರ್ಮಗಳ ಉದಯ' ಪಠ್ಯ ಬೋಧಿಸದಿರಲು ಸೂಚನೆ: ಆದೇಶ ರದ್ದುಪಡಿಸಲು ದಸಂಸ ಆಗ್ರಹ

Update: 2021-03-05 16:37 GMT

ಬೆಂಗಳೂರು, ಮಾ. 5: ಆರನೆ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ಹೊಸ ಧರ್ಮಗಳ ಉದಯ'(ಜೈನ-ಬೌದ್ದ) ಬೋಧನೆ-ಕಲಿಕೆ/ಮೌಲ್ಯಮಾಪನಕ್ಕೆ ಪರಿಗಣಿಸದಿರುವ ಬಗ್ಗೆ ಶಿಕ್ಷಣ ಸಚಿವರ ಆದೇಶ ರದ್ದುಪಡಿಸದಿದ್ದರೆ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಮೌರ್ಯ ವೃತ್ತದಲ್ಲಿನ ಗಾಂಧಿ ಪುತ್ಥಳಿಯ ಬಳಿ ಎಸ್ಟಿ-ಎಸ್ಟಿ ವಿದ್ಯಾರ್ಥಿಗಳು ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ವಾರ್ಷಿಕ 15 ಲಕ್ಷ ರೂ. ವರಮಾನಕ್ಕೆ ಹೆಚ್ಚಿಸಲು ಒತ್ತಾಯಿಸಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದಲಿತರು ಕ್ಲಿಷ್ಟಕರ ದಿನಗಳನ್ನು ಎದುರಿಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಸಂಘ ಪರಿವಾರ ಹುನ್ನಾರ ನಡೆಸಿದೆ. ಮೀಸಲಾತಿ ದಿನೇ ದಿನೇ ನಾಶಗೊಳಿಸುತ್ತಾ ಹೊರಟಿದೆ. ಎಲ್ಲ ಸರಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗಿಕರಣಗೊಳಿಸಲಾಗುತ್ತಿದೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಕಲ್ಪಿಸಬೇಕು ಎಂದು ಕೋರಿದರು.

ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್ ಮಾತನಾಡಿ, ಕೇಂದ್ರ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ವೈಭವಿಕರಿಸಿ ದಲಿತ/ರೈತರ ಹಕ್ಕುಗಳನ್ನು ವಂಚಿಸಲಾಗುತ್ತಿದೆ ಎಂದು ದೂರಿದರು, ಜಾತಿ ಆಧಾರದ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾಗಿರುವವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಹೊರತು ಉಳ್ಳವರಿಗೆ ಮೀಸಲಾತಿ ಕಲ್ಪಿಸಲು ಮುಂದಾಗುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಾತಿ ವ್ಯವಸ್ಥೆಯನ್ನು ಪೋಷಿಸುವ ಕುಲಕಸುಬು ಇಂತಹದ್ದೆ ಜಾತಿಯವರು ಇಂತಹದ್ದೇ ಕೆಲಸ ಮಾಡಬೇಕೆಂಬ ಕೆಟ್ಟ ಪದ್ದತಿ ವ್ಯಾಪಕವಾಗಿ ಹರಡಿದ್ದು ಮನುಸ್ಮೃತಿ. ಆದರೆ, ನಾವಿಂದು ಅಂಬೇಡ್ಕರ್ ರೂಪಿಸಿಕೊಟ್ಟ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದ ಅವರು, ಪರಿಶಿಷ್ಟರ ಕಲ್ಯಾಣಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಮುಖಂಡರಾದ ಕ್ಯಾಲಸನಳ್ಳಿ ಶ್ರೀನಿವಾಸ, ಆನೇಕಲ್ ವೆಂಕಟೇಶ ಮೂರ್ತಿ, ದಾಸರಹಳ್ಳಿ ರಾಜು, ಉಮಾಶಂಕರ್ ಪುನುಗಮಾರನಹಳ್ಳಿ, ಗೊಲ್ಲಹಳ್ಳಿ ತಿಮ್ಮಯ್ಯ, ಮುನಿರಾಜು ಬಂಡೆಬೊಮ್ಮಸಂದ್ರ, ತಗಚಗುಪ್ಪೆ ಹನುಮಂತರಾಜು, ಸವಿತಾ, ರಾಮಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News