ಕೋವಿಡ್ ನಿಯಮ ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ: ಪ್ರತಿಭಟನಾಕಾರರಿಗೆ ಬಿಬಿಎಂಪಿ ಆಯುಕ್ತ ಎಚ್ಚರಿಕೆ

Update: 2021-03-05 17:02 GMT

ಬೆಂಗಳೂರು, ಮಾ.5: ನಗರದಲ್ಲಿ ಪ್ರತಿಭಟನೆ, ಮೆರವಣಿಗೆ ನಡೆಸುವ ಸಂಘ-ಸಂಸ್ಥೆಗಳ ಪ್ರಮುಖರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆ ನೀಡಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಹಿನ್ನೆಲೆ ನಗರದೆಲ್ಲೆಡೆ ಪ್ರತಿಭಟನೆ, ಮೆರವಣಿಗೆಗಳು ಹೆಚ್ಚಾಗಿದ್ದು, ಬಹುತೇಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಆಯೋಜಕರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಪ್ರತಿಭಟನೆ ನಡೆಸಲು ಅನುಮತಿ ಪಡೆಯುವ ಆಯೋಜಕರಿಗೆ ಮಾಸ್ಕ್, ಸುರಕ್ಷಿತ ಅಂತರ ಸೇರಿದಂತೆ ಇನ್ನಿತರೆ ಮಾರ್ಗಸೂಚಿಗಳನ್ನು ಪಾಲನೆ ಕಡೆ ಗಮನ ಹರಿಸಬೇಕು. ಇಲ್ಲವೆಂದರೆ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತ್ತೊಂದೆಡೆ ನಗರದೆಲ್ಲೆಡೆ ಸ್ಮಾರ್ಟ್ ಸಿಟಿ ಯೋಜನೆದಡಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ ಸಂಚಾರದಟ್ಟಣೆ ಹೆಚ್ಚಾಗಿದೆ. ಆದರೆ, ಮಳೆಗಾಲದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News