ಸಂಸದರ ಹರಾಜು ಹಾಕಿ ವಿನೂತನವಾಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್

Update: 2021-03-06 17:18 GMT

ಬೆಂಗಳೂರು, ಮಾ.6: ಮಹದಾಯಿ, ಮೇಕೆದಾಟು ಯೋಜನೆ ಆರಂಭಕ್ಕೆ ಒತ್ತಾಯಿಸಿ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಕಾಮಗಾರಿ ಕೈಗೆತ್ತಿಕೊಂಡರೂ ಮೌನ ವಹಿಸಿರುವ ಸರಕಾರದ ಕ್ರಮ ವಿರೋಧಿಸಿ ಕನ್ನಡ ಒಕ್ಕೂಟದ ಸದಸ್ಯರು, ಸಂಸದರನ್ನು ಹರಾಜು ಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಒಕ್ಕೂಟದ ಸದ್ಯರು, ಅನ್ಯಾಯದ ವಿರುದ್ಧ ಲೋಕಸಭಾ ಸದಸ್ಯರು ಧ್ವನಿ ಎತ್ತದಿರುವುದು ತೀವ್ರ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡಿನಲ್ಲಿ ಕಾವೇರಿ ನದಿಜೋಡಣೆಗೆ ಸಂಬಂಧಿಸಿದಂತೆ 118 ಕಿ.ಮೀ ಉದ್ದದ ಕಾಲುವೆ ತೋಡಲು ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ, ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಮೃದು ಧೋರಣೆ ಅನುಸರಿಸುತ್ತಿದೆ ಎಂದರು.

ರಾಜ್ಯ ಸರಕಾರ ಜನಹಿತವನ್ನು ಮರೆತು ವರ್ತಿಸುತ್ತಿದ್ದು, ನಮ್ಮ ಸಂಸದರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ನೀರಾವರಿ ಯೋಜನೆಗಳ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಆದರೆ ಸರಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಮಾ.13ರಂದು ಬೆಂಗಳೂರಿನಿಂದ ಕನ್ನಂಬಾಡಿಯವರೆಗೆ ಯಾತ್ರೆ ಹಮ್ಮಿಕೊಂಡು ಸಮ್ಮೇಳನ ನಡೆಸುತ್ತೇವೆ. ಮಹದಾಯಿ, ಕಾವೇರಿ ಯೋಜನೆ ಸಂಬಂಧ ಚರ್ಚಿಸಿ ಕರ್ನಾಟಕ ಬಂದ್ ಮಾಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News