‘ಘನತ್ಯಾಜ್ಯ ನಿರ್ವಹಣೆಗೆ ಲಿಮಿಟೆಡ್ ಕಂಪೆನಿ' ಸ್ಥಾಪಿಸಲು ಆದೇಶ

Update: 2021-03-06 17:37 GMT

ಬೆಂಗಳೂರು, ಮಾ. 6: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯೂ ಸೇರಿದಂತೆ ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಎಲ್ಲ ಪ್ರಕಾರದ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಗೆ ಸರಕಾರಿ ಸ್ವಾಮ್ಯದ ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ ಕಂಪೆನಿ'ಯನ್ನು ಕಂಪೆನೀಸ್ ಕಾಯ್ದೆಯಡಿ ಸ್ಥಾಪಿಸಲು ಸರಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಮಾರ್ಚ್ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಅನುಮೋದನೆ ನೀಡಲಾಗಿತ್ತು. ಇದೀಗ ನಗರಾಭಿವೃದ್ಧಿ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿ ಹಿದಾಯತ್ತುಲ್ಲ ಕೆ.ಎ. ಅವರು ಮಾ.5ರಂದು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹ, ಸಾಗಾಟ, ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲು ಅನುಕೂಲವಾಗುವಂತೆ ಬೆಂಗಳೂರು ವೇಸ್ಟ್ ಮ್ಯಾನೇಜ್‍ಮೆಂಟ್ ಕಂಪೆನಿ ಲಿಮಿಟೆಡ್ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಶೇ.51ರಷ್ಟು ಬಿಬಿಎಂಪಿ, ಶೇ.49ರಷ್ಟು ರಾಜ್ಯ ಸರಕಾರದ ಪಾಲು ಇರುತ್ತದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇದರ ಸಿಇಒ ಆಗಿರಲಿದ್ದಾರೆ ಎಂದು ಆದೇಶದಲ್ಲಿ ಪಾಲಿಕೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News