ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಕೇಂದ್ರಕ್ಕೆ ಶಿಫಾರಸ್ಸಿಗೆ ಆಗ್ರಹಿಸಿ ದಸಂಸ ಧರಣಿ

Update: 2021-03-06 17:56 GMT

ಬೆಂಗಳೂರು, ಮಾ.6: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕುರಿತ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ  ಡಾ.ಎನ್ ಮೂರ್ತಿ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಅವರು, ಎ.ಜೆ. ಸದಾಶಿವ ಆಯೋಗ ವೈಜ್ಞಾನಿಕವಾಗಿ ವರ್ಗೀಕರಿಸಿ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಿ 9 ವರ್ಷಗಳಾಗಿವೆ. ಹಿಂದುಳಿದ ಪರಿಶಿಷ್ಟ ಉಪ ಜಾತಿಗಳಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಮಾದಿಗ ಜನಾಂಗಕ್ಕೆ ಶೇ.6, ಹೊಲೆಯರಿಗೆ ಶೇ.5, ಬೋವಿ, ಕೊರಮ, ಕೊರಚರಿಗೆ ಶೇ.3, ಇತರರಿಗೆ ಶೇ.1ರಷ್ಟು  ಮೀಸಲಾತಿ ಸೇರಿ ಒಟ್ಟು ಶೇ.15ರಷ್ಟು ಸೌಲಭ್ಯ ನೀಡುವಂತೆ ಪ್ರಸ್ತಾಪಿಸಲಾಗಿದೆ. ಈ ವರದಿಯನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

2012ರಿಂದಲೂ ಸದಾಶಿವ ಆಯೋಗದ ವರದಿಯನ್ನು ಜಾರಿ ತರುವಲ್ಲಿ ಎಲ್ಲ ಪಕ್ಷಗಳು ನಿರ್ಲಕ್ಷ್ಯ ದೋರಣೆ ತೋರಿವೆ. ಇದು ಅತ್ಯಂತ ಶೋಚನೀಯವಾದದು. ಮಾದಿಗ, ಬೋವಿ ಜನಾಂಗಕ್ಕೆ ಸೇರಿದ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತದೆ ಮೌನ ವಹಿಸಿರುವುದು ಸರಿಯಲ್ಲ. ತಾವು ಕೂಡ ಮೀಸಲಾತಿಯ ಲಾಭ ಪಡೆದು ಆಯ್ಕೆಯಾಗಿದ್ದೀರಿ ಎಂಬುದನ್ನು ಮರೆಯಬಾರದೆಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಕಾಂತ್‍ರಾಜ್ ಆಯೋಗದ ವರದಿಯನ್ನು ಜಾರಿಗೊಳಿಸಿ ಜಾತಿವಾರು ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 70ಕ್ಕೆ ಹೆಚ್ಚಿಸಿ ಪರಿಶಿಷ್ಟ ಮೀಸಲಾತಿಯನ್ನು ಶೇ.25ರಷ್ಟು ಹೆಚ್ಚಿಸಿ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News