ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸೋಂಕು ಹೆಚ್ಚಳ: ತುರ್ತು ಸಭೆ ನಡೆಸಿದ ಬಿಬಿಎಂಪಿ

Update: 2021-03-06 17:57 GMT

ಬೆಂಗಳೂರು, ಮಾ.6: ದಿನೇ ದಿನೇ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ನಗರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಸಭಾಂಗಣದಲ್ಲಿ ಎಲ್ಲ ವಿಶೇಷ ಆಯುಕ್ತರು, ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ಜೊತೆ ವರ್ಚುವಲ್ ಮೂಲಕ ತುರ್ತು ಸಭೆ ನಡೆಸಿದರು.

ಸಭೆನಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿದ್ದು, ಪ್ರಮುಖವಾಗಿ ಹೊರ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಉಲ್ಬಣವಾಗದಂತೆ ತ್ವರಿತಗತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕಳೆದ 24 ಗಂಟೆಗಳಲ್ಲಿ 38 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದೇ ರೀತಿ ರೋಗ ಲಕ್ಷಣಗಳಿರುವವರನ್ನು ಗುರುತಿಸಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲು ಕ್ರಮ ಕೈಗೊಳ್ಳಬೇಕು. ಎಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತವೆಯೋ ಅಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ಜೊತೆಗೆ ಪ್ರಥಮ, ದ್ವಿತೀಯ ಸಂರ್ಪಕಿತರ ಪತ್ತೆಕಾರ್ಯ ಸರಿಯಾಗಿ ಮಾಡಬೇಕು. ಅದಕ್ಕಾಗಿ ಪಾಲಿಕೆಯ ಕಂದಾಯ, ಇಂಜಿನಿಯರ್ ಹಾಗೂ ಇನ್ನಿತರೆ ಅಧಿಕಾರಿಗಳನ್ನು ಬಳಸಿಕೊಂಡು ಸಂಪರ್ಕ ಪತ್ತೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಕೋವಿಡ್ ಸೋಂಕು ಪತ್ತೆಯಾದ ಬಳಿಕ ಎಲ್ಲಿ ಪ್ರಕರಣ ಕಂಡುಬಂದಿದೆಯೋ ಅಲ್ಲಿ ಪಾಲಿಕೆಯ ಕಣ್ಗಾವಲು ತಂಡವು ಸರಿಯಾಗಿ ಕೆಲಸ ಮಾಡಬೇಕು ಎಂದ ಅವರು, ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಎಲ್ಲಾ ವಲಯಗಳಲ್ಲಿಯೂ ಕೋವಿಡ್ ಪ್ರಕರಣಗಳು ಕಂಡುಬಂದಿರುವ ಕಳೆದೆರಡು ತಿಂಗಳ ವರದಿಯನ್ನು ಪರಿಶೀಲಿಸಿ, ಯಾವ ವಾರ್ಡ್, ಪ್ರದೇಶ, ಸ್ಥಳದಲ್ಲಿ ಹೆಚ್ಚು ಪ್ರಕಣಗಳು ಕಂಡುಬರುತ್ತಿವೆ, ಅಲ್ಲಿ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಶೀಲಿಸಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮವಹಿಸಿ ಎಂದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ರಂದೀಪ್, ತುಳಸಿ ಮದ್ದಿನೇನಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News