'ತುಳು'ವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್

Update: 2021-03-07 15:54 GMT

ಬೆಂಗಳೂರು, ಮಾ.7: ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಒತ್ತಾಯಿಸಿದ್ದಾರೆ.

ರವಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ `ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸ್ವತಂತ್ರ ಲಿಪಿಯನ್ನು ಹೊಂದಿದೆ. ಹೀಗಾಗಿ ತುಳು ರಾಜ್ಯದ ಅಧಿಕೃತ ಭಾಷೆ ಹಾಗೂ ಎಂಟನೇ ಪರಿಚ್ಛೇದಕ್ಕೆ ಸೇರುವ ಎಲ್ಲಾ ಅರ್ಹತೆಗಳು ಹೊಂದಿದೆ ಎಂದು ಹೇಳಿದರು.

ಇಂದು ಶಾಲೆಯಲ್ಲಿ ತುಳು 3ನೇ ಐಚ್ಛಿಕ ಭಾಷೆಯಾಗಿದ್ದು, ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಇದೆ. ಪಿಯುಸಿಗೂ ತುಳು ಪಠ್ಯ ಪುಸ್ತಕ ಸಿದ್ಧವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿಯಲ್ಲೂ ತುಳು ಕಲಿಸಲಾಗುವುದೆಂದು ಅವರು ತಿಳಿಸಿದರು.

ಮೀನುಗಾರಿಕಾ ಸಚಿವ ಎಸ್.ಅಂಗಾರ ಮಾತನಾಡಿ, ತುಳು ಭಾಷೆಗೆ ಭವಿಷ್ಯವಿದೆ. ಅದಕ್ಕಾಗಿ ತುಳು ನಾಡಿನವರು ತುಳುವನ್ನು ಮಾತನಾಡುವುದು ಸೇರಿದಂತೆ ಮತ್ತಿತರ ಸೃಜನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು..

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ್ ಭಟ್, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಧರ್ಮಸ್ಥಳ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಗಡಿನಾಡು ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

8ನೇ ಪರಿಚ್ಛೇದಕ್ಕೆ ಸೇರಿಸಲು ಸಂಕಲ್ಪ

ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಳು ಭಾಷಿಕರು, 'ನಾನು ತುಳುವ, ತುಳು ನನ್ನ ತಾಯಿ, ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು, ತುಳು 8ನೇ ಪರಿಚ್ಛೇದಕ್ಕೆ ಸೇರಬೇಕು. ಇದು ನನ್ನ ಹಕ್ಕು' ಎಂದು ಸಂಕಲ್ಪ ಮಾಡಿದರು.

ತುಳುಭಾಷೆಯನ್ನು ರಾಜ್ಯದ ಅಧಿಕೃತ  ಭಾಷೆಯನ್ನಾಗಿ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ ಶೀಘ್ರದಲ್ಲಿ ರಾಜ್ಯ ಭಾಷೆಯೆಂದು ಘೋಷಿಸಲು ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ, ತುಳು, ಕೊಡವ ಮತ್ತು ಬಂಜಾರ ಭಾಷೆಯನ್ನು 8ನೇ ಪರಿಚ್ಛೇಧಕ್ಕೆ ಸೇರ್ಪಡೆ ಮಾಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರ ಸಂಸ್ಕೃತಿ ಸಚಿವರ ಬಳಿಗೆ ಸಂಬಂಧಪಟ್ಟ ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರನ್ನೊಳಗೊಂಡ ನಿಯೋಗ ಕರೆದುಕೊಂಡು ಹೋಗಲಾಗುವುದು.

-ಅರವಿಂದ ಲಿಂಬಾವಳಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರಶಸ್ತಿ ಪುರಸ್ಕೃತರು: 2020ನೆ ಸಾಲಿನ 'ಗೌರವ ಪ್ರಶಸ್ತಿ': ರಾಮಚಂದರ್ ಬೈಕಂಪಾಡಿ (ತುಳು ಸಾಹಿತ್ಯ), ತುಂಗಪ್ಪ ಬಂಗೇರ (ತುಳು ನಾಟಕ), ಆನಂದ ಪೂಜಾರಿ (ಜಾನಪದ) ಹಾಗೂ ಪುಸ್ತಕ ಬಹುಮಾನವನ್ನು ಕವನ ವಿಭಾಗದಲ್ಲಿ ಡಾ.ಕೆ. ಚಿನ್ನಪ್ಪಗೌಡ ಅವರಿಗೆ ನೀಡಿ ಗೌರವಿಸಲಾಯಿತು.

2020ನೆ ಸಾಲಿನ 'ವಿಶೇಷ ಯುವ ಸಾಧಕ' ಪ್ರಶಸ್ತಿ: ಯೋಗೀಶ್ ಶೆಟ್ಟಿ (ತುಳು ಭಾಷಾ ಸಂಘಟಕ), ನವೀನ್ ಶೆಟ್ಟಿ (ನಿರೂಪಣಾ ಕ್ಷೇತ್ರ), ರಮೇಶ್ ಪಿ. (ಜಾನಪದ ಕಲಾ ಸಂಘಟಕ), ನಾಗರಾಜ್ ಭಟ್ (ತುಳುನಾಡ ದೈವ ಕ್ಷೇತ್ರ ಸಂಶೋಧಕ), ಭರತ್ ಸೌಂದರ್ಯ (ತುಳುನಾಡ ಕಲಾ ಪೋಷಕ), ಸುಭಾಸ್ ನಾಯಕ್ (ತುಳು ಶಾಸನ ಸಂಶೋಧನೆ), ದೀಪಕ್ ಪಡುಕೋಣೆ (ತುಳು ಲಿಪಿಯ ಪರಿಶೋಧಕರು) ಅವರಿಗೆ ಪ್ರದಾನ ಮಾಡಲಾಯಿತು.

2020ನೆ ಸಾಲಿನ 'ವಿಶೇಷ ಬಾಲ ಪ್ರತಿಭಾ' ಪ್ರಶಸ್ತಿ: ಯೋಗ ಕ್ಷೇತ್ರದಲ್ಲಿ ಕು.ತನುಶ್ರೀ ಪಿತ್ರೋಡಿ, ಕಲಾ ವಿಭಾಗದಲ್ಲಿ ಸನ್ನಿಧಿ ಟಿ. ರೈ ಪೆರ್ಲ ಹಾಗೂ ಜಾನಪದ ಕ್ಷೇತ್ರದಲ್ಲಿ ತಕ್ಷಿಲ್ ದೇವಾಡಿಗ ಅವರಿಗೆ ನೀಡಲಾಯಿತು.

ವಿಶೇಷ ಸಂಘಟನಾ ಪ್ರಶಸ್ತಿ: ಕುವೈತ್ ನ ತುಳುಕೂಟ ಕುವೈತ್, ಬರೋಡದ ತುಳು ಸಂಘ, ಬೆಂಗಳೂರಿನ ಬೆಂಗಳೂರು ತುಳುಕೂಟ, ಉಡುಪಿಯ ತುಳುಕೂಟ ಉಡುಪಿ ಹಾಗೂ ದಕ್ಷಿಣ ಕನ್ನಡ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News