ಮಹಿಳೆಯನ್ನು ದೇವರಿಗೆ ಹೋಲಿಸುವ ಬಿಜೆಪಿಗೆ ಸಂಸತ್‍ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿ ಸಾಧ್ಯವೇ: ಕಲೈಸೆಲ್ವಿ

Update: 2021-03-07 17:16 GMT

ಬೆಂಗಳೂರು, ಮಾ.7: ಮಹಿಳೆಯನ್ನು ದೇವರಿಗೆ ಹೋಲಿಸುವ, ದೇಶವನ್ನು ತಾಯಿಯೆಂದು ಕರೆಯುವ ಬಿಜೆಪಿ ಸಂಸತ್‍ನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಸಿದ್ಧವಿದಿಯೇ ಎಂದು ವಿಚಾರವಾದಿ ಕಲೈಸೆಲ್ವಿ ಸವಾಲು ಹಾಕಿದ್ದಾರೆ.

ರವಿವಾರ ಅಖಿಲ ಭಾರತ ವಿಚಾರವಾದಿ ಟ್ರಸ್ಟ್ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಮಹಿಳಾ ಮೀಸಲಾತಿ ಮರಿಚಿಕೆಯೇ? ಎಂಬ ವಿಷಯದ ಕುರಿತು ಮಾತನಾಡಿದ ಅವರು, ಅನಿವಾಸಿ ಭಾರತೀಯ ಮಹಿಳೆಯರ ಸಾಧನೆಗಳನ್ನು ತಮ್ಮದೆಂದು ಕೊಚ್ಚಿಕೊಂಡು ಪ್ರಚಾರ ಮಾಡುವ ಬಿಜೆಪಿ, ದೇಶದೊಳಗಿರುವ ಮಹಿಳೆಯರ ರಾಜಕೀಯ ಸ್ಥಾನಮಾನಗಳಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ದೇಶದ ನೆರೆಹೊರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಅಘ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳ ಸಂಸತ್‍ಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆದರೆ, ಭಾರತದಲ್ಲಿ ಮಾತ್ರ ಇದು ಸಾಧ್ಯವಾಗಿಲ್ಲ. ಬ್ರಾಹ್ಮಣಶಾಹಿ ಹಾಗೂ ಪುರುಷ ಪ್ರಧಾನ್ಯತೆ ಚಿಂತನೆಯನ್ನು ಒಳಗೊಂಡಿರುವ ಬಿಜೆಪಿ ಸರಕಾರವಧಿಯಲ್ಲಿ ಇದು ಸಾಧ್ಯವಾಗಲಾರದು ಎಂದು ಅವರು ಅಭಿಪ್ರಾಯಿಸಿದ್ದಾರೆ.

1996ರಲ್ಲಿ ಎಚ್.ಡಿ.ದೇವೇಗೌಡ ಪ್ರಧಾನಮಂತ್ರಿಯಾಗಿದ್ದಾಗ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿತ್ತು. ನಂತರ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಮಹಿಳಾ ಮಸೂದೆ ಮೂಲೆಗುಂಪಾಯಿತು. ನಂತರ ಆಟಲ್‍ಬಿಹಾರಿ ವಾಜಪೇಯಿ ಹಾಗೂ ಮನಮೋಹನ್‍ಸಿಂಗ್ ಅವಧಿಯಲ್ಲಿ ಮಸೂದೆಗೆ ಅನುಮೋದನೆ ಪಡೆಯಲು ನಡೆಸಿದ ಪ್ರಯತ್ನ ವಿಫಲವಾಯಿತು. ಈಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಬಹುಮತವನ್ನು ಪಡೆದಿದೆ. ಮಹಿಳಾ ಮಸೂದೆಯನ್ನು ಸುಲಭವಾಗಿ ಅಂಗೀಕರಿಸಬಹುದು. ಆದರೆ, ಬಿಜೆಪಿಗೆ ಆ ಬಗ್ಗೆ ಇಚ್ಚಾಶಕ್ತಿಯಿಲ್ಲವೆಂದು ಅವರು ಆರೋಪಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಸಮತಾರಾಣಿ ಪ್ರಸ್ತುತ ಸಂದರ್ಭದಲ್ಲಿ ಧಾರ್ಮಿಕತೆ ಮತ್ತು ಮಹಿಳಾ ಸ್ವಾತಂತ್ರ್ಯ ವಿಷಯದ ಕುರಿತು ಮಾತನಾಡಿ, ಭಾರತದಲ್ಲಿ ವೈದಿಕಶಾಹಿಗಳು ಮಹಿಳೆಯನ್ನು ಮುಕ್ಕೋಟಿ ದೇವರಿಗೆ ಹೋಲಿಸುತ್ತಾ ವಾಸ್ತವದಲ್ಲಿ ಶೋಷಣೆ ಮಾಡುತ್ತಾ ಬರುತ್ತಿದ್ದಾರೆ. ಮಹಿಳೆಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ. ಪುರುಷನ ಅಡಿಯಳಾಗಿ ಬದುಕುವುದೇ ಶ್ರೇಷ್ಠ ಕಾರ್ಯವೆಂದು ಮನುಸ್ಮೃತಿಯಲ್ಲಿ ನಿಯಮ ರೂಪಿಸಲಾಗಿದೆ. ಆಧುನಿಕ ಭಾರತದಲ್ಲಿ ಮನುಸ್ಮೃತಿ ಚಿಂತನಾಧಾರೆಗಳನ್ನು ಜಾರಿ ಮಾಡಲು ಹಿಂದುತ್ವ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಭಾರತಕ್ಕೆ ಬ್ರಿಟಿಷರ ಆಗಮಿಸಿದ ನಂತರ ಸ್ವಲ್ಪಮಟ್ಟಿಗೆ ಬದಲಾವಣೆಯ ಗಾಳಿ ಬೀಸಿತು. ಅದರ ಪರಿಣಾಮವಾಗಿ ಜ್ಯೋತಿ ಬಾಫುಲೆ ಶಿಕ್ಷಿತರಾದರು. ನಂತರ ಸಾವಿತ್ರಿಬಾಫುಲೆಗೆ ಶಿಕ್ಷಣ ಕಲಿಸಿ ಹೆಣ್ಣುಮಕ್ಕಳ ಶಾಲೆಗಳನ್ನು ಪ್ರಾರಂಭಿಸಿದರು. ನಂತರ ಅಂಬೇಡ್ಕರ್ ಮಹಿಳೆಯರ ಪರವಾಗಿ ಹಲವು ಕಾನೂನುಗಳನ್ನು ರೂಪಿಸಿದ್ದರು. ಆದರೆ, ಇವತ್ತಿನ ಮನುವಾದಿಗಳು ಮಹಿಳಾ ಪರವಾದ ಕಾನೂನುಗಳನ್ನು ಸರಿಯಾಗಿ ಜಾರಿ ಮಾಡದೆ, ಶೋಷಣೆಯನ್ನು ಮುಂದುವರಿಸಿದ್ದಾರೆ. ಈ ಮನುವಾದಿ ಹಿಂದುತ್ವ ಶಕ್ತಿಗಳ ವಿರುದ್ದ ನಿರಂತರವಾದ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಅಧ್ಯಕ್ಷ ಪ್ರೊ.ಎ.ಎಸ್.ನಟರಾಜ್, ಖಜಾಂಚಿ ನಾಗೇಂದ್ರಕುಮಾರ, ಉಪಾಧ್ಯಕ್ಷ ಪ್ರಕಾಶ ಹೆಬ್ಬಳ್ಳಿ, ಕಾರ್ಯದರ್ಶಿ ಆರ್.ನಾಗೇಶ ಅರಳಕುಪ್ಪೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News