ಅಸಮಾನತೆ ನಿವಾರಣೆಗೆ ಅಂಬೇಡ್ಕರರ ವಿಚಾರಗಳು ಹೆಚ್ಚು ಪ್ರಸ್ತುತ: ಡಾ.ಸಿ.ಜಿ.ಲಕ್ಷ್ಮೀಪತಿ

Update: 2021-03-07 17:53 GMT

ಬೆಂಗಳೂರು, ಮಾ. 7: ‘ಇಂದಿನ ಸಂದರ್ಭದಲ್ಲಿ ಭಾರತದ ಜಾತಿವ್ಯವಸ್ಥೆಯಲ್ಲಿನ ಅಸಮಾನತೆ ನಿವಾರಣೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು ಅತ್ಯಂತ ಹೆಚ್ಚು ಪ್ರಸ್ತುತ' ಎಂದು ಗೃಹ ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಸಿ.ಜಿ.ಲಕ್ಷ್ಮಿಪತಿ ಹೇಳಿದ್ದಾರೆ.

ರವಿವಾರ ಇಲ್ಲಿನ ಸರಕಾರಿ ರಾಮ್ ನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹೊನ್ನುಡಿ ಕನ್ನಡ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ಡಾ.ಬಿ. ಆರ್.ಅಂಬೇಡ್ಕರ್ ಓದು' ಕುರಿತ ಉಪನ್ಯಾಸ ಮತ್ತು ಅಂಬೇಡ್ಕರ್ ಕುರಿತ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸಮ ಸಮಾಜ ನಿರ್ಮಾಣ ಮತ್ತು ಅಸ್ಪೃಶ್ಯರು ಸೇರಿದಂತೆ ಶೋಷಿತ ಸಮುದಾಯಗಳ ಹಕ್ಕುಗಳು ಹಾಗೂ ಅವರ ಬೆಳವಣಿಗೆಗಾಗಿ ಅಂಬೇಡ್ಕರ್ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಎಂದ ಲಕ್ಷ್ಮೀಪತಿ, ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನೀಲಮ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಎ.ಕುಲಗೋಡು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಕೆ.ನಟರಾಜ್ ಹಾಗೂ ಪ್ರಾಧ್ಯಾಪಕಿ ಪ್ರೊ.ಪ್ರೇಮಾವತಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News