ಯುಪಿಐ ಮೂಲಕ ವಹಿವಾಟು ನಡೆಸುತ್ತೀರಾ? ಹಾಗಿದ್ದರೆ ಅದರ ಗರಿಷ್ಠ ಮಿತಿ ನಿಮಗೆ ಗೊತ್ತಿರಲಿ

Update: 2021-03-08 11:21 GMT

ನೀವು ಮನೆಯಿಂದ ಹೊರಗೆ ಹೋಗುವಾಗ ಜೇಬಿನಲ್ಲಿ ಕಡ್ಡಾಯವಾಗಿ ಹಣವನ್ನು ಹೊಂದಿರಲೇಬೇಕಿದ್ದ ದಿನಗಳು ಕಳೆದುಹೋಗಿವೆ. ನಾವಿಂದು ಹಣದ ವಹಿವಾಟು ಕೆಲವೇ ನಿಮಿಷಗಳಲ್ಲಿ ನಡೆದು ಹೋಗುವ ಯುಗದಲ್ಲಿದ್ದೇವೆ. ಮಾಲ್ ಆಗಿರಲಿ,ಪೆಟ್ರೋಲ್ ಬಂಕ್ ಆಗಿರಲಿ ಅಥವಾ ಸಣ್ಣಪುಟ್ಟ ಅಂಗಡಿಗಳೇ ಆಗಿರಲಿ,ಎಲ್ಲ ಕಡೆಯೂ ಆನ್ಲೈನ್ನಲ್ಲಿ ಹಣವನ್ನು ಸ್ವೀಕರಿಸಲಾಗುತ್ತಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್ಪಿಸಿಐ)ವು ಅಭಿವೃದ್ಧಿಗೊಳಿಸಿರುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐ ಮೊಬೈಲ್ ಫೋನ್ ಮೂಲಕ ಎರಡು ಬ್ಯಾಂಕ್ಗಳ ನಡುವೆ ಹಣದ ತಕ್ಷಣ ವರ್ಗಾವಣೆಗೆ ನೆರವಾಗುತ್ತದೆ.

ಯುಪಿಐ ವರ್ಗಾವಣೆಗಳಿಗಾಗಿ ಎನ್ಪಿಸಿಐ ಪ್ರತಿ ವಹಿವಾಟಿಗೆ ಮತ್ತು ಒಂದು ದಿನದಲ್ಲಿಯ ವಹಿವಾಟುಗಳಿಗೆ ಗರಿಷ್ಠ ಮಿತಿಯನ್ನು ನಿಗದಿಗೊಳಿಸಿದೆ. ಹಾಲಿ ಪ್ರತಿ ಯುಪಿಐ ವಹಿವಾಟಿಗೆ ಒಂದು ಲ.ಕ್ಷ ರೂ.ಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಯುಪಿಐ ತಕ್ಷಣ ಪಾವತಿ ಸೇವೆ (ಐಎಂಪಿಎಸ್) ತಂತ್ರಜ್ಞಾನವನ್ನು ಆಧರಿಸಿರುವುದರಿಂದ ಈ ಮಿತಿಗೆ ಅವಕಾಶವಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಯುಪಿಐ ವಹಿವಾಟುಗಳ ಗರಿಷ್ಠ ಮಿತಿಯನ್ನು 20ಕ್ಕೆ ನಿಗದಿಗೊಳಿಸಲಾಗಿದೆ. ಪ್ರತಿ ಯುಪಿಐ ವಹಿವಾಟು ಒಂದು ಲ.ರೂ.ಗಳ ಮಿತಿಯನ್ನು ಹೊಂದಿದ್ದರೆ,ಗರಿಷ್ಠ ಮಿತಿಯು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಇದರ ಪರಿಣಾಮವಾಗಿ ಗರಿಷ್ಠ ಮಿತಿಯು 10,000 ರೂ.ಗಳಿಂದ ಒಂದು ಲ.ರೂ.ವರೆಗೆ ಇರುತ್ತದೆ. ಯುಪಿಐ ವಹಿವಾಟುಗಳಿಗಾಗಿ ದಿನವೊಂದಕ್ಕೆ ಒಂದು ಲ.ರೂ.ಗಳ ಮಿತಿಯನ್ನು ವಿಧಿಸಲಾಗಿದೆ.

ಭೀಮ್ ಯುಪಿಐ ವಹಿವಾಟುಗಳಲ್ಲಿ ಪ್ರತಿ ವಹಿವಾಟಿಗೆ ಮಿತಿ 40,000 ರೂ. ಮತ್ತು 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ಮಿತಿ ಯೂ 40,000 ರೂ.ಆಗಿವೆ. ಈ ಮಿತಿಯು ಭೀಮ್ ನೊಂದಿಗೆ ಜೋಡಣೆಗೊಂಡಿರುವ ಬ್ಯಾಂಕ್ ಖಾತೆಗಳಿಗೆ ಲಭ್ಯವಿರುತ್ತದೆ. ವಾಣಿಜ್ಯ ಪಾವತಿಗಳಿಗಾಗಿ ಗರಿಷ್ಠ ಮೊತ್ತವು 24 ಗಂಟೆಗಳಲ್ಲಿ ಎರಡು ಲ.ರೂ.ಗಳಾಗಿವೆ. ನೀವು ನಿಮ್ಮ ಮೊಬೈಲ್ ಹ್ಯಾಂಡ್ಸೆಟ್,ಮೊಬೈಲ್ ಸಂಖ್ಯೆ ಅಥವಾ ಯುಪಿಐ ಪಿನ್ ಅನ್ನು ಬದಲಿಸಿದ್ದರೆ ನೀವು ಗರಿಷ್ಠ 5,000 ರೂ.ಗಳನ್ನು ಮಾತ್ರ ವರ್ಗಾವಣೆಗೊಳಿಸಬಹುದು ಮತ್ತು ಈ ನಿರ್ಬಂಧವು ಮೊದಲ 24 ಗಂಟೆಗಳಿಗೆ ಅಸ್ತಿತ್ವದಲ್ಲಿರುತ್ತದೆ.

ಯುಪಿಐ ವಹಿವಾಟು ಮಿತಿಯು ವಿವಿಧ ಬ್ಯಾಂಕ್ ಖಾತೆಗಳಿಗೆ ವಿಭಿನ್ನವಾಗಿರುತ್ತದೆ. ಕೆಲವು ಬ್ಯಾಂಕುಗಳಲ್ಲಿಯ ಪ್ರತಿ ವಹಿವಾಟಿನ ಮಿತಿ ಮತ್ತು ಪ್ರತಿ ದಿನಕ್ಕೆ ವಹಿವಾಟುಗಳ ಸಂಖ್ಯೆಯ ಮಿತಿಯ ಕುರಿತು ಮಾಹಿತಿಗಳು ಇಲ್ಲಿವೆ.......

► ಎಸ್ ಬಿ ಐ : ದಿನದ ಮಿತಿ ಒಂದು ಲ.ರೂ. 24 ಗಂಟೆಗಳಲ್ಲಿ ಗರಿಷ್ಠ 20 ವಹಿವಾಟುಗಳಿಗೆ ಅವಕಾಶವಿದೆ.

► ಎಚ್ ಡಿ ಎಫ್ ಸಿ ಬ್ಯಾಂಕ್ : ದಿನದ ಮಿತಿ ಒಂದು ಲ.ರೂ. 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟುಗಳಿಗೆ ಅವಕಾಶವಿದೆ.

► ಕೋಟಕ್ ಮಹಿಂದ್ರಾ ಬ್ಯಾಂಕ್: ದಿನದ ಮಿತಿ 50,000 ರೂ. ಪ್ರತಿ ದಿನಕ್ಕೆ ಎರಡು ವಹಿವಾಟುಗಳು

► ಸೆಂಟ್ರಲ್ ಬ್ಯಾಂಕ್ : ಪ್ರತಿ ದಿನದ ಮಿತಿ 40,000 ರೂ.

► ಕೆನರಾ ಬ್ಯಾಂಕ್ : ಪ್ರತಿ ದಿನದ ಮಿತಿ 20,000 ರೂ. ಪ್ರತಿ ದಿನಕ್ಕೆ 10 ವಹಿವಾಟುಗಳು.

► ಐಸಿಐಸಿಐ ಬ್ಯಾಂಕ್: ದಿನದ ಮಿತಿ ಒಂದು ಲ.ರೂ. ಐಸಿಐಸಿಐ ಬ್ಯಾಂಕಿನ ಖಾತೆದಾರರು 24 ಗಂಟೆಗಳಲ್ಲಿ 20 ಸಲ ಹಣವನ್ನು ವರ್ಗಾವಣೆಗೊಳಿಸಬಹುದು.

► ಬ್ಯಾಂಕ್ ಆಫ್ ಇಂಡಿಯಾ: ಪ್ರತಿ ವಹಿವಾಟಿಗೆ 10,000 ರೂ. ಫೋನ್ ಪೇ ಮತ್ತು ಗೂಗಲ್ ಪೇಗಳಂತೆ ಪೇಟಿಎಂ ಕೂಡ ಒಂದು ವಹಿವಾಟಿಗೆ ಒಂದು ಲ.ರೂ.ವರೆಗೆ ಅವಕಾಶ ನೀಡುತ್ತದೆ. 24 ಗಂಟೆಗಳ ಅವಧಿಯಲ್ಲಿ ನೀವು ಒಂದು ಲ.ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ.

 ದಿನವೊಂದಕ್ಕೆ ಲಭ್ಯವಿರುವ ಗರಿಷ್ಠ ವಹಿವಾಟು ಅವಕಾಶಗಳನ್ನು ಬಳಸಿಕೊಂಡರೆ ನೀವು ಮತ್ತೆ ಯುಪಿಐ ವಹಿವಾಟನ್ನು ನಡೆಸುವಂತಿಲ್ಲ. ಅದಕ್ಕಾಗಿ ದಿನದ ಮೊದಲ ವಹಿವಾಟಿನ ನಂತರದ 24 ಗಂಟೆಗಳು ಮುಗಿಯುವವರೆಗೆ ನೀವು ಕಾಯಬೇಕಾಗುತ್ತದೆ.

ಭೀಮ್ ಆ್ಯಪ್ನಲ್ಲಿ ದಿನದ ಮಿತಿ 40,000 ರೂ. ಮತ್ತು ಪ್ರತಿ ವಹಿವಾಟಿನ ಮಿತಿ ಕೂಡ 40,000 ರೂ.ಆಗಿರುತ್ತದೆ. ಈ ಮಿತಿ ಭೀಮ್ ಆ್ಯಪ್ ಗೆ ಸಂಬಂಧಿಸಿದ ಎಲ್ಲ ಬ್ಯಾಂಕ್ ಖಾತೆಗಳಿಗೆ ಅನ್ವಯಿಸುತ್ತದೆ.

ಎಲ್ಲ ಬ್ಯಾಂಕುಗಳು ಎನ್ಪಿಸಿಐ ಮತ್ತು ಭಾರತ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ. ಹೀಗಾಗಿ ನೀವು ನಿಮ್ಮ ಬ್ಯಾಂಕಿಗೆ ಕೇಳಿಕೊಂಡರೂ ವಹಿವಾಟು ಮಿತಿಯನ್ನು ಹೆಚ್ಚಿಸುವ ಸಾಧ್ಯತೆಗಳಿಲ್ಲ. ಎನ್ಪಿಸಿಐ ಮಿತಿಯಡಿ ಬ್ಯಾಂಕುಗಳು ತಮ್ಮದೇ ಆದ ಮಿತಿಗಳನ್ನು ನಿಗದಿಗೊಳಿಸಬಹುದು. ತಮ್ಮ ಗ್ರಾಹಕರಿಗೆ ಹೆಚ್ಚಿನ ರಕ್ಷಣೆಯನ್ನೊದಗಿಸಲು ಅವು ಹೀಗೆ ಮಾಡಲು ಅವಕಾಶವಿದೆ. ಹೀಗಾಗಿ ಕೆಲವು ಬ್ಯಾಂಕುಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ವಹಿವಾಟುಗಳ ಮೇಲೆ ಕಡಿಮೆ ಮಿತಿಯನ್ನು ನಿಗದಿಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News