×
Ad

ಮೊಬೈಲ್ ಕ್ಯಾಂಟಿನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Update: 2026-02-26 21:51 IST

ವಿಜಯನಗರ(ಹೊಸಪೇಟೆ): ಪ್ರವಾಸೋದ್ಯಮ ಇಲಾಖೆಯಿಂದ 2025-26ನೇ ಸಾಲಿನ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮದಾರರನ್ನು ಉತ್ತೇಜಿಸಲು 1 ತಿಂಗಳ ಉದ್ಯಮಶೀಲತೆ ತರಬೇತಿ ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆ ವತಿಯಿಂದ ಮೊಬೈಲ್ ಕ್ಯಾಂಟಿನ್ ವಾಹನ ಖರೀದಿಸಲು ಇಲಾಖೆಯ ಸಹಾಯಧನ ಘಟಕ ವೆಚ್ಚದಲ್ಲಿ ಶೇ.70% ರಷ್ಟು ಹಾಗೂ ಗರಿಷ್ಠ ರೂ.5.00 ಲಕ್ಷ ನೀಡಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20 ರಿಂದ 55 ವರ್ಷದೊಳಗಿರಬೇಕು, ವಿಜಯನಗರ ಜಿಲ್ಲೆಯ ನಿವಾಸಿಯಾಗಿರಬೇಕು. ಕನಿಷ್ಠ ಹತ್ತನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ನಗರ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.2.00 ಲಕ್ಷ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.1.50 ಲಕ್ಷ ಮೀರಿರಬಾರದು. ಯಾವುದೇ ಸರ್ಕಾರಿ ಇಲಾಖೆ ಅಥವಾ ಮಂಡಳಿಯಲ್ಲಿ ಖಾಯಂ ನೌಕರಿಯಲ್ಲಿರಬಾರದು.

ಅರ್ಜಿದಾರರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹತ್ತನೇ ತರಗತಿ ಅಂಕಪಟ್ಟಿ ಮತ್ತು ವಾಸಸ್ಥಳ ದೃಢೀಕರಣ ಪತ್ರ ಮುಂತಾದ ಅಗತ್ಯ ದಾಖಲೆಯೊಂದಿಗೆ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಮಲಾಪುರ ಕಚೇರಿಗೆ ಮಾರ್ಚ್ 16 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 7892722443 ಗೆ ಸಂಪರ್ಕಿಸಲು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News