ಅನೈತಿಕ ಸರಕಾರ ಮಂಡಿಸುವ ಬಜೆಟ್ ಭಾಷಣ ಬಹಿಷ್ಕಾರ: ಸಿದ್ದರಾಮಯ್ಯ

Update: 2021-03-08 14:29 GMT

ಬೆಂಗಳೂರು, ಮಾ.8: ರಾಜ್ಯ ಸರಕಾರಕ್ಕೆ ಬಜೆಟ್ ಮಂಡಿಸುವ ಯಾವುದೆ ನೈತಿಕತೆ ಇಲ್ಲ. ಕೆಐಎಡಿಬಿ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆಲಮ್ ಪಾಷ ಎಂಬವರು ದಾಖಲು ಮಾಡಿದ್ದ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದು, ಇವರಿಬ್ಬರ ವಿರುದ್ಧ ತನಿಖೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಒಂದು ಹಂತದಲ್ಲಿ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದಾರೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಭಯದಿಂದ ಇನ್ನೂ ಆರು ಜನ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

ತಮ್ಮ ವಿರುದ್ಧ ಯಾವುದೇ ರೀತಿಯ ಸಿಡಿಗಳು ಸಿಕ್ಕರೆ ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಮಧ್ಯಂತರ ಆದೇಶವನ್ನು ಈ ಸಚಿವರು ನ್ಯಾಯಾಲಯದ ಮೂಲಕ ಪಡೆದುಕೊಂಡಿದ್ದಾರೆ. ಈ ಸರಕಾರ ಅನೈತಿಕತೆಯ ಹೊರೆ ಹೊತ್ತಿಕೊಂಡಿದೆ. ಈ ಸರಕಾರದಲ್ಲಿ ಸಿಎಂ, ಈ ಆರು ಜನ ಸಚಿವರಿಗೆ ಮುಂದುವರೆಯಲು ನೈತಿಕತೆ ಇಲ್ಲ. ಇವರೆಲ್ಲ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇವರು ಮಂಡಿಸುವ ಬಜೆಟ್ ಕೇಳಿಕೊಂಡು ಕೂರಬೇಕಾ? ಆದುದರಿಂದ, ಇಂದು ಸದನಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಹೋಗಿ ಪ್ರತಿಭಟನೆ ಮಾಡುತ್ತೇವೆ. ಹಣಕಾಸು ವಿಧೇಯಕಗಳನ್ನು ಈ ಹಿಂದೆ ಅವಕಾಶವಿದ್ದರೂ ನಾವು ವಿರೋಧಿಸಲಿಲ್ಲ. ಆದರೆ, ಅನಿವಾರ್ಯವಾಗಿ ಇಂದು ಬಜೆಟ್ ಭಾಷಣವನ್ನು ಪ್ರತಿಭಟಿಸಿ, ಸಭಾತ್ಯಾಗ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News