ಬಜರಂಗ್ ಪೂನಿಯಾಗೆ ಚಿನ್ನದೊಂದಿಗೆ ನಂ.1 ಸ್ಥಾನ

Update: 2021-03-08 18:34 GMT

 ರೋಮ್, ಮಾ ಮಟಿಯೊ ಪೆಲಿಕೋನ್ ರ್ಯಾಂಕಿಂಗ್ ಸಿರೀಸ್ ಪಂದ್ಯಾವಳಿಯಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಚಿನ್ನ ಜಯಿಸಿ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.

ಸ್ಪರ್ಧೆಯ ಕೊನೆಯ 30 ಸೆಕೆಂಡುಗಳಲ್ಲಿ ಎರಡು ಪಾಯಿಂಟ್‌ಗಳನ್ನು ಕಲೆ ಹಾಕುವ ಮೂಲಕ ಪೂನಿಯಾ ಚಿನ್ನ ಜಯಿಸಿದರು. 65 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ತುಲ್ಗಾ ತುಮುರ್ ಓಚಿರ್ ವಿರುದ್ಧ ಫೈನಲ್‌ನ ಅಂತಿಮ ಕ್ಷಣಗಳವರೆಗೆ ಬಜರಂಗ್ 0-2 ಅಂತರದಲ್ಲಿ ಹಿಂದುಳಿದಿದ್ದರು ಆದರೆ ಅಂತಿಮ 30 ಸೆಕೆಂಡುಗಳಲ್ಲಿ ಎದುರಾಳಿಯನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾದರು.

ಕೊನೆಯ ಸ್ಕೋರಿಂಗ್ ಪಾಯಿಂಟ್‌ನ್ನು ಪೂನಿಯಾ ದಾಖಲಿಸಿದ್ದ್ದರಿಂದ, ಅವರನ್ನು ರವಿವಾರ ರಾತ್ರಿ ಮಾನದಂಡಗಳ ಮೇಲೆ ವಿಜೇತರೆಂದು ಘೋಷಿಸಲಾಯಿತು.

ಕೋವಿಡ್ -19 ಲಾಕ್‌ಡೌನ್ ಕಾರಣದಿಂದಾಗಿ ಒಂದು ವರ್ಷದ ವಿರಾಮ ಬಜರಂಗ್ ಅವರಿಗೆ ಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಅನುಕೂಲವಾಗಿತ್ತು. ಟೋಕಿಯೊ ಒಲಿಂಪಿಕ್ಸ್‌ನ ಪದಕದ ಮೇಲೆ ಕಣ್ಣಿಟ್ಟಿರುವ 27ರ ಹರೆಯದ ಪೂನಿಯಾ ರಕ್ಷಣಾತ್ಮಕ ತಂತ್ರಗಳನ್ನು ಇನಷ್ಟು ಸುಧಾರಿಸುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

‘‘ವಿರಾಮದ ಮೊದಲಿನ ಸ್ಥಿತಿಯನ್ನು ಗಮನಿಸಿದರೆ ನನ್ನ ಲೆಗ್ ಡಿಫೆನ್ಸ್‌ನಲ್ಲಿ ಸುಧಾರಣೆ ಕಂಡಿದ್ದೇನೆ . ಆದರೆ ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ಕೆಲಸ ಬೇಕು. ನನ್ನ ಆಕ್ರಮಣಕಾರಿ ನಡೆಗಳ ಬಗ್ಗೆ ಇನ್ನೂ ಸಹ ಉತ್ತಮವಾಗಿರಬೇಕು ಎಂದು ಬಜರಂಗ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಮಂಗೋಲಿಯನ್ ವಿರುದ್ಧದ ಫೈನಲ್‌ನಲ್ಲಿ ಅವರ ಹೋರಾಟದ ಬಗ್ಗೆ ಕೇಳಿದಾಗ ‘‘ ನೋಡಿ, 65 ಕೆಜಿ ವಿಭಾಗವು ಅತ್ಯಂತ ಸ್ಪರ್ಧಾತ್ಮಕವಾಗಿತ್ತು. ಮಂಗೋಲಿಯನ್ ದುರ್ಬಲ ಎದುರಾಳಿಯಲ್ಲ. ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದವರು. ಈ ವಿಭಾಗದ ಎಲ್ಲ ಕುಸ್ತಿಪಟುಗಳು ಟೋಕಿಯೊದಲ್ಲಿ ಉತ್ತಮ ಸಾಧನೆ ಮಾಡುವ ಒಂದೇ ಗುರಿಯನ್ನು ಹೊಂದಿದ್ದರು’’ ಎಂದು ಹೇಳಿದರು.

ಎಪ್ರಿಲ್ 9ರಿಂದ 11ರವರೆಗೆ ಖಝಕಿಸ್ತಾನದಲ್ಲಿ ನಡೆಯಲಿರುವ ಏಶ್ಯನ್ ಚಾಂಪಿಯನ್‌ಶಿಪ್‌ಗೆ ಮೊದಲು ಬಜರಂಗ್ ಮತ್ತೆ ರಾಷ್ಟ್ರೀಯ ಶಿಬಿರಕ್ಕೆ ಮರಳಲಿದ್ದಾರೆ.

‘‘ನಾನು ವಿದೇಶದಲ್ಲಿ ತರಬೇತಿ ಪಡೆಯಲು ನೋಡುತ್ತಿದ್ದೇನೆ. ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಯುರೋಪ್‌ನಲ್ಲಿ ನಿರ್ಬಂಧಗಳು ಹೇರಿರುವ ಕಾರಣದಿಂದಾಗಿ ಅದು ಸಾಧ್ಯವಾಗುತ್ತದೆಯೇ ಎಂದು ನೋಡಬೇಕಾಗಿದೆ. ಈ ದಿನಗಳಲ್ಲಿ ಪ್ರಯಾಣ ಸುಲಭವಲ್ಲ.’’ ಎಂದರು.

ರೋಮ್ ಈವೆಂಟ್‌ನ ಮೊದಲ ಶ್ರೇಯಾಂಕದಲ್ಲಿ ಬಜರಂಗ್ ಎರಡನೇ ಸ್ಥಾನದಲ್ಲಿದ್ದರು ಮತ್ತು ಈಗ 65 ಕೆಜಿ ವಿಭಾಗದಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇದ್ದಾರೆ.

 ವಿಶಾಲ್ ಕಾಳಿರಮಣ 70 ಕೆಜಿ ವಿಭಾಗದಲ್ಲಿ ಖಝಕಿಸ್ತಾನದ ಸಿರ್ಬಾಜ್ ತಲ್ಗತ್ ವಿರುದ್ಧ 5-1 ಅಂತರದಲ್ಲಿ ಜಯಿಸಿ ಕಂಚು ಪಡೆದರು. ನಾಲ್ಕು ವರ್ಷಗಳ ಡೋಪಿಂಗ್ ನಿಷೇಧದ ನಂತರ ಇತ್ತೀಚೆಗೆ ಸ್ಪರ್ಧಾತ್ಮಕ ಕುಸ್ತಿಗೆ ಮರಳಿದ ನರಸಿಂಗ್ ಪಂಚಮ್ ಯಾದವ್ ಕಂಚಿನ ಪದಕದ ಪ್ಲೇ-ಆಫ್‌ನಲ್ಲಿ 0-5 ಅಂತರದಿಂದ ಖಝಕಿಸ್ತಾನದ ಡೇನಿಯಾರ್ ಕೈಸಾನೋವ್ ವಿರುದ್ಧ ಸೋಲು ಅನುಭವಿಸಿದರು. ಈ ವರ್ಷದ ಮೊದಲ ರ್ಯಾಂಕಿಂಗ್ ಸರಣಿಯಲ್ಲಿ ಭಾರತದ ಕುಸ್ತಿಪಟುಗಳು ಏಳು ಪದಕಗಳನ್ನು ಪಡೆದಿದ್ದಾರೆ. ಮಹಿಳೆಯರ ಸ್ಪರ್ಧೆಯಲ್ಲಿ ವಿನೇಶಾ ಫೋಗಟ್ ಮತ್ತು ಸರಿತಾ ಮೊರ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಗ್ರೀಕೋ ರೋಮನ್ ಕುಸ್ತಿ: ನೀರಜ್ (63 ಕೆಜಿ), ಕುಲದೀಪ್ ಮಲಿಕ್ (72 ಕೆಜಿ), ನವೀನ್ (130 ಕೆಜಿ) ಕಂಚಿನ ಪದಕಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News