‘ನೈತಿಕತೆ ಕಳೆದುಕೊಂಡವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ': ಸಚಿವ ನಾರಾಯಣಗೌಡರನ್ನು ಕೆಣಕಿದ ಪುಟ್ಟರಂಗಶೆಟ್ಟಿ
ಬೆಂಗಳೂರು, ಮಾ. 9: ‘ನೈತಿಕತೆ ಕಳೆದುಕೊಂಡವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ' ಎಂದು ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಕೆಣಕಿದ್ದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ, ‘ನಾನು ಪ್ರಶ್ನೆ ಕೇಳಬೇಕಾದ ಸಚಿವರು ನೈತಿಕತೆ ಕಳೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧ ಕೋರ್ಟ್ ಮೆಟ್ಟಲೇರಿದ್ದು ಅವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ' ಎಂದು ವಾಗ್ಬಾಣ ಬಿಟ್ಟರು. ಇದರಿಂದ ಕೆರಳಿದ ನಾರಾಯಣಗೌಡ, ‘ಏರಿದ ಧ್ವನಿಯಲ್ಲಿ ನನ್ನ ನೈತಿಕತೆ ಪ್ರಶ್ನಿಸಲು ಇವರಿಗೆ ಹಕ್ಕಿಲ್ಲ. ಹೀಗಾಗಿ ಅವರು ಆಡಿದ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಇಲ್ಲವೇ ಅವರು ಕ್ಷಮೆಯಾಚಿಸಬೇಕು' ಎಂದು ಪಟ್ಟು ಹಿಡಿದರು.
ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರಾದ ಪಿ.ಟಿ.ಪರಮೇಶ್ವರ್ ನಾಯ್ಕ್, ಅಜಯ್ ಸಿಂಗ್, ಪುಟ್ಟರಂಗಶೆಟ್ಟಿ ಅವರು ತಪ್ಪೇನು ಹೇಳಿಲ್ಲ. ಆ ಪದವೇನು ಅಸಂಸದೀಯವೇನು ಅಲ್ಲ ಎಂದು ತಿರುಗೇಟು ನೀಡಿದರು. ಬಳಿಕ ಮಧ್ಯಪ್ರವೇಶಿಸಿದ ನಾರಾಯಣಗೌಡ, ನಾನು ಯಾರ ಆಸ್ತಿಯನ್ನು ಹೊಡೆದಿಲ್ಲ. ಸದಸ್ಯರು ಗೌರವದಿಂದ ಮಾತನಾಡಬೇಕು. ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ನೈತಿಕತೆ ಇದ್ದರೆ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಇಲ್ಲಿಗೆ ಬರುತ್ತಿರಲಿಲ್ಲ ಎಂದು ಹೇಳಿದರು. ಬಳಿಕ ಉಭಯ ಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಿದ ಸ್ಪೀಕರ್ ಕಾಗೇರಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡ ಹಿನ್ನಲೆಯಲ್ಲಿ ಗದ್ದಲ-ಕೋಲಾಹಲಕ್ಕೆ ತೆರೆಬಿತ್ತು.