ಪರಭಾಷಾ ಸಿನೆಮಾ ಹಾವಳಿ ವಿರೋಧಿಸಿ ಪ್ರತಿಭಟನೆ
ಬೆಂಗಳೂರು, ಮಾ.9: ಪರಭಾಷೆ ಚಿತ್ರಗಳ ಹಾವಳಿ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ಚಿತ್ರಗಳಿಗಿಂತ ಪರಭಾಷ ಚಿತ್ರಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತಿವೆ. ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗೆ ಅಪಾಯವಾಗುತ್ತಿದೆ. ಇದರ ವಿರುದ್ಧ ಆರು ದಶಕಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಕರ್ನಾಟಕದಲ್ಲಿ ಮಾತ್ರ ಪರಭಾಷ ಚಿತ್ರಗಳು ಹೆಚ್ಚು ಪ್ರದರ್ಶನವಾಗುತ್ತವೆ. ಆದರೆ, ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚು ಪ್ರದರ್ಶನವಾಗುವುದಿಲ್ಲ ಎಂದು ಹೇಳಿದರು.
ಚಿತ್ರೋದ್ಯಮಗಳನ್ನು ನಂಬಿ ಸಾವಿರಾರು ಮಂದಿ ಬದುಕುತ್ತಿದ್ದು, ಅವಲಂಬಿತರಿಗೆ ಅನ್ಯಾಯವಾಗುತ್ತದೆ ಎಂದ ಅವರು, ಬಜೆಟ್‍ನಲ್ಲಿ ಕನ್ನಡ ಚಿತ್ರರಂಗದ ಉಳಿವಿಗೆ ಯಾವುದೇ ಯೋಜನೆಗಳನ್ನು ಸರಕಾರ ಘೋಷಿಸಿಲ್ಲ. ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಪ್ಪಬೇಕು ಎಂದು ಆಗ್ರಹಿಸಿದರು.