ಸಮಾಜವನ್ನು ಇನ್ನೂ ಕಾಡುತ್ತಿರುವ ವರದಕ್ಷಿಣೆ

Update: 2021-03-10 05:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮತ್ತೊಂದು ಮಹಿಳಾ ದಿನಾಚರಣೆ ನಮ್ಮ ನಡುವೆ ಸದ್ದಿಲ್ಲದೆ ಬಂದು ಹೋಗಿದೆ. ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಮಾನವೀಯ ಹಂತವನ್ನು ತಲುಪಿರುವ ಈ ಸಂದರ್ಭದಲ್ಲಿ, ಸಕಲ ಮಹಿಳೆಯರಿಗೂ ಶುಭಾಶಯಗಳನ್ನು ಹಂಚಿಕೊಂಡಿದ್ದೇವೆ. ಆದರೆ ಆ ಆಶಯ ನಿಜವಾಗಬೇಕಾದರೆ ಸರಕಾರ ಮತ್ತು ಸಮಾಜ ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ.

ಇತ್ತೀಚೆಗಷ್ಟೇ ಒಬ್ಬಳು ತರುಣಿ ‘ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ವೀಡಿಯೊ ಮಾಡಿ, ನದಿಗೆ ಹಾರಿದಳು. ಅವಳೆಷ್ಟು ನಿರ್ಲಿಪ್ತಳಾಗಿದ್ದಳು ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವಳು ಅಳುತ್ತಿರಲಿಲ್ಲ. ತನ್ನ ಪತಿಯನ್ನೂ ನಿಂದಿಸಲಿಲ್ಲ. ಸಮಾಜವನ್ನೂ ಖಂಡಿಸಲಿಲ್ಲ. ‘ಇನ್ನೊಮ್ಮೆ ನನಗೆ ಮನುಷ್ಯರನ್ನು ನೋಡುವ ಆಸೆಯಿಲ್ಲ’ ಎಂದು ಅವಳು ದೇವರನ್ನು ಕೋರಿಕೊಂಡಿದ್ದಳು. ತನ್ನ ಸಾವನ್ನು ಆಕೆ ಪತಿಗೆ ಉಡುಗೊರೆಯಾಗಿ ನೀಡಿದ್ದಳು. ಕರುಳು ಹಿಂಡುವಂತಿತ್ತು ಆಕೆ ಕೊನೆಯಲ್ಲಿ ಹಂಚಿಕೊಂಡ ಮಾತುಗಳು. ಪತಿಯ ಹಣದ ದುರಾಸೆಗಾಗಿ ಆಕೆ ಅಂತಿಮವಾಗಿ, ಪತಿಯನ್ನು ತೊರೆಯುವ ಬದಲು ಪ್ರಾಣವನ್ನು ತೊರೆದಳು. ‘ವರದಕ್ಷಿಣೆ’ಯ ಕುರಿತಂತೆ ಚರ್ಚಿಸುವುದೇ ಇಂದು ಕ್ಲೀಷೆಯ ವಿಷಯವಾಗಿ ಬಿಟ್ಟಿದೆ. ಯಾಕೆಂದರೆ, ಆ ವಿಷಯ ಅಷ್ಟರಮಟ್ಟಿಗೆ ಚರ್ಚಿಸಿ ಸವಕಲಾಗಿದೆ. ಆದರೆ ಇಂದಿಗೂ ಕುಟುಂಬದೊಳಗೆ ಈ ವರದಕ್ಷಿಣೆ ಸಮಸ್ಯೆ ಬೇರೆ ಬೇರೆ ರೂಪದಲ್ಲಿ ಹೆಣ್ಣನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಕಾನೂನುಬಾಹಿರವಾಗಿದ್ದರೂ ಭಾರತದಲ್ಲಿ ಅದು ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಅನೇಕ ಕುಟುಂಬಗಳು ತಮ್ಮ ಮನೆಯ ಹೆಣ್ಣನ್ನು ಮದುವೆ ಮಾಡಿಕೊಡಲು ನೀಡುವ ವರದಕ್ಷಿಣೆಯು, ಅವುಗಳ ವಾರ್ಷಿಕ ಆದಾಯಕ್ಕಿಂತಲೂ ಹಲವು ಪಟ್ಟು ಅಧಿಕವಾಗಿರುತ್ತದೆ. ಇಂದು ನಾವು ಹೆಣ್ಣು ಭ್ರೂಣ ಹತ್ಯೆ, ವಧುದಹನ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಹೆಣ್ಣಿನ ಕುರಿತಂತೆ ಪಾಲಕರು ಕೀಳರಿಮೆ ತೊರೆಯಬೇಕು ಎಂದು ವಾದಿಸುತ್ತೇವೆ.

ಇದೇ ಸಂದರ್ಭದಲ್ಲಿ ಹೆಣ್ಣನ್ನು ಸುತ್ತುವರಿದ ವರದಕ್ಷಿಣೆಯಂತಹ ಸಮಸ್ಯೆಗಳೇ ಇತರೆಲ್ಲ ದುರಂತಗಳಿಗೆ ಕಾರಣ ಎನ್ನುವುದನ್ನು ಮರೆಯುತ್ತೇವೆ. ವರದಕ್ಷಿಣೆ ಸಂಬಂಧಿಸಿದ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರ ನಿಖರ ಸಂಖ್ಯೆಯನ್ನು ಲೆಕ್ಕಹಾಕುವುದು ಕಷ್ಟಕರವಾಗಿದೆ. ಪತಿಯ ಮನೆಯವರ ಪ್ರತೀಕಾರದ ಭೀತಿಯಿಂದ ಅನೇಕ ಮಹಿಳೆಯರು ತಾವು ವರದಕ್ಷಿಣೆ ದೌರ್ಜನ್ಯಕ್ಕೊಳಗಾಗಿದ್ದರೂ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದರ ಜೊತೆಗೆ ಭಾರತದಲ್ಲಿ ವರದಕ್ಷಿಣೆ ನೀಡುವುದೂ ಅಪರಾಧವಾಗಿರುವುದರಿಂದ ಮಹಿಳೆಯ ಕುಟುಂಬದ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಾಗುವ ಸಾಧ್ಯತೆ ಇರುವುದರಿಂದ ಆಕೆ ನಿಸ್ಸಹಾಯಕಳಾಗುತ್ತಾಳೆ. ಇದರ ಜೊತೆಗೆ ಅನೇಕ ವರದಕ್ಷಿಣೆ ಸಂಬಂಧಿತ ಹಿಂಸಾಚಾರ ಪ್ರಕರಣಗಳು ಬೇರೆ ಬೇರೆ ಸಾಮಾಜಿಕ ಕಾರಣಗಳಿಂದ ವರದಿಯಾಗದೆ ಹೋಗುತ್ತವೆ. ವರದಕ್ಷಿಣೆೆ ಹಿಂಸೆಯಿಂದ ಆದ ಸಾವುಗಳು ಅಥವಾ ಗಾಯಗಳನ್ನು ಅಡುಗೆಮನೆಯಲ್ಲಿನ ಆಕಸ್ಮಿಕಗಳು ಅಥವಾ ಆತ್ಮಹತ್ಯೆ ಪ್ರಕರಣಗಳೆಂದೇ ತಪ್ಪಾಗಿ ದಾಖಲಿಸಲಾಗುತ್ತಿದೆ.

2005-2006ನೇ ಸಾಲಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಪಾಲ್ಗೊಂಡ ಮಹಿಳೆಯರಲ್ಲಿ ಮೂರನೇ ಒಂದಕ್ಕಿಂತಲೂ ಅಧಿಕ ಮಂದಿ ತಮ್ಮ ಪತಿಯಂದಿರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ ಹಾಗೂ ಅರ್ಧಾಂಶಕ್ಕಿಂತಲೂ ಅಧಿಕ ಮಂದಿಯನ್ನು ಪತಿಯ ಮನೆಯೊಳಗಿನ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದರಿಂದ ಹೊರಗಿಡಲಾಗಿದೆ. 1961ರಲ್ಲಿ ಜಾರಿಗೊಳಿಸಲಾದ ವರದಕ್ಷಿಣೆ ನಿಷೇಧ ಕಾಯ್ದೆಯು ವರದಕ್ಷಿಣೆ ನೀಡುವುದನ್ನು ಹಾಗೂ ಪಡೆಯುವುದನ್ನು ನಿಷೇಧಿಸುತ್ತದೆ. ವರದಕ್ಷಿಣೆ ಸ್ವೀಕರಿಸಿದ ಅಪರಾಧಕ್ಕಾಗಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5 ಸಾವಿರ ರೂ. ದಂಡವನ್ನು ವಿಧಿಸಬಹುದಾಗಿದೆ. ಆದರೆ ಕಾಯ್ದೆಯ ನಿಯಮಗಳು ಸಾಕಷ್ಟು ಬಲಿಷ್ಠವಾಗಿರದ ಕಾರಣ ವರದಕ್ಷಿಣೆಯ ಪಿಡುಗಿಗೆ ಕಡಿವಾಣ ಹಾಕುವ ಪ್ರಯತ್ನಗಳು ಬಹುತೇಕವಾಗಿ ಯಶಸ್ಸನ್ನು ಕಂಡಿಲ್ಲ.

ಕಾಯ್ದೆ ಸರ್ವಕ್ಕೂ ಪರಿಹಾರವೂ ಅಲ್ಲ. 1985-86ನೇ ಸಾಲಿನಲ್ಲಿ ವರದಕ್ಷಿಣೆ ಕಾಯ್ದೆಗೆ ತಿದ್ದುಪಡಿ ತಂದ ತರುವಾಯ ವರದಕ್ಷಿಣೆ ನೀಡಿಕೆಯಲ್ಲಿ ಗಣನೀಯ ಕುಸಿತ ಕಂಡಿತೇನೋ ನಿಜ. ಆದರೆ ಮಹಿಳೆಯ ಮೇಲೆ ಬೇರೆ ರೀತಿಯಲ್ಲಿ ಇದು ದುಷ್ಪರಿಣಾಮವನ್ನು ಬೀರತೊಡಗಿತು. ವಿವಾಹಿತೆಯ ಮೇಲೆ ತೀವ್ರವಾದ ದೈಹಿಕ ಹಿಂಸಾಚಾರದ ಸಾಧ್ಯತೆಯನ್ನು ಇನ್ನಷ್ಟು ಅಧಿಕಗೊಳಿಸಿತು. ಪತಿ ಹಾಗೂ ಕುಟುಂಬಿಕರಿಂದ ಮಹಿಳೆಯ ಮೇಲೆ ದೌರ್ಜನ್ಯದ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂತು. ಮಾನಸಿಕ ಹಿಂಸೆಗಳೂ ಹೆಚ್ಚಿದವು. ಹಾಗೆಯೇ, ಪತಿಯಿಂದ ಪ್ರತ್ಯೇಕಗೊಂಡು ವಾಸಿಸುವವರ ಪ್ರಮಾಣದಲ್ಲಿಯೂ ಇಳಿಕೆಯುಂಟಾಯಿತು. ಪತ್ನಿಯನ್ನು ತೊರೆದಲ್ಲಿ ವರದಕ್ಷಿಣೆ ಕಾನೂನಿನ ಉರುಳಿಗೆ ಸಿಲುಕಬಹುದೆಂಬ ಭೀತಿಯಿಂದ ವರದಕ್ಷಿಣೆ ಪೀಡಕ ಪತಿಯಂದಿರು ತಮ್ಮ ಪತ್ನಿಗೆ ವಿವಾಹವಿಚ್ಛೇದನ ನೀಡದೆಯೇ ಚಿತ್ರಹಿಂಸೆಯನ್ನು ನೀಡುವ ಪ್ರವೃತ್ತಿ ಹೆಚ್ಚತೊಡಗಿತು.2016ರಲ್ಲಿ 7,621 ವರದಕ್ಷಿಣೆ ಸಾವುಗಳು ಸಂಭವಿಸಿರುವುದಾಗಿ ಭಾರತೀಯ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಮಾಡಿದೆ. ಈ ವರದಕ್ಷಿಣೆ ಮಧ್ಯಮವರ್ಗದಲ್ಲಿ ಮಾತ್ರ ಇದೆ ಎಂಬ ತಪ್ಪು ಕಲ್ಪನೆಗಳೂ ನಮ್ಮ ನಡುವೆ ಇದೆ. ಇಂದು ವರದಕ್ಷಿಣೆ ಬೇರೆ ಬೇರೆ ರೂಪಗಳನ್ನು ಪಡೆದಿದೆ. ಉದ್ಯೋಗಸ್ಥ ಮಹಿಳೆ, ತಾನು ಕಚೇರಿಯಲ್ಲಿ ದುಡಿದ ವೇತನವನ್ನು ಮಾಸಿಕವಾಗಿ ಅಂದರೆ ಕಂತಿನ ರೂಪದಲ್ಲಿ ಗಂಡನಿಗೆ ಪರೋಕ್ಷ ವರದಕ್ಷಿಣೆ ರೂಪದಲ್ಲಿ ನೀಡಬೇಕಾದ ಪರಿಸ್ಥಿತಿ ಹಲವು ಕುಟುಂಬಗಳಲ್ಲಿದೆೆ.

ವಧುವಿಗೆ ತನ್ನ ಹಣವನ್ನು, ತನ್ನ ತವರು ಮನೆಯ ಕಷ್ಟಗಳಿಗೆ ಉಪಯೋಗಿಸುವ ಸ್ವಾತಂತ್ರವೇ ಇರುವುದಿಲ್ಲ. ಎಲ್ಲವನ್ನೂ ಪತಿಯ ಕೈಗೇ ತಂದಿರಿಸಬೇಕು. ಇಂತಹ ವರದಕ್ಷಿಣೆಯ ಸಮಸ್ಯೆಗಳನ್ನು ಅದೆಷ್ಟೋ ವಿದ್ಯಾವಂತ ಹೆಣ್ಣು ಮಕ್ಕಳು ಅನುಭವಿಸುತ್ತಿರುತ್ತಾರೆ. ಅತಿ ಶ್ರೀಮಂತ ಕುಟುಂಬಗಳಲ್ಲೂ ವರದಕ್ಷಿಣೆಯ ಕಾಟಕ್ಕೆ ಮಹಿಳೆ ಬಲಿಯಾಗಬೇಕಾಗುತ್ತದೆ. ಬೃಹತ್ ಉದ್ಯಮಿಗಳ ಪಾಲಿಗೆ ಮದುವೆ ಎನ್ನುವುದು ಎರಡು ಕಂಪೆನಿಗಳ ವಿಲೀನವಾಗಿರುತ್ತದೆ. ಇಲ್ಲಿ ಹೆಣ್ಣು, ಗಂಡಿನ ಮನಸ್ಸಿನ ವಿಲೀನಕ್ಕಿಂತ ಅವರ ಕಂಪೆನಿಯ ಶೇರುಗಳು, ನಗದು ಇತ್ಯಾದಿಗಳ ವಿಲೀನವೇ ಮುಖ್ಯವಾಗುತ್ತದೆ. ಅಂತಿಮವಾಗಿ ಈ ವ್ಯವಹಾರದ ಪರಿಣಾಮವನ್ನು ಹೆಣ್ಣೇ ಅನುಭವಿಸಬೇಕಾಗುತ್ತದೆ. ಮದುವೆ ಎನ್ನುವುದು ಎರಡು ಮನಸ್ಸುಗಳು ಮಾತ್ರವಲ್ಲ, ಎರಡು ಕುಟುಂಬಗಳು ಒಂದಾಗುವ ಅಪರೂಪದ ಕ್ಷಣ. ಹಣ, ಸಂಪತ್ತನ್ನು ಆಧರಿಸಿ ಈ ಬಾಂಧವ್ಯ ಬೆಸೆದರೆ, ಅದೇ ಹಣ ಮತ್ತು ಸಂಪತ್ತೇ ಅವರ ಬಾಂಧವ್ಯಕ್ಕೆ ಮುಳುವಾಗಬಹುದು. ಹಾಗೆಯೇ, ವರದಕ್ಷಿಣೆ ಕಾನೂನನ್ನು ಪುರುಷನ ಕುಟುಂಬದ ವಿರುದ್ಧ ದುರುಪಯೋಗ ಪಡಿಸಿಕೊಂಡ ಎಷ್ಟೋ ಪ್ರಕರಣಗಳಿವೆ.

ಆದರೆ ವರದಕ್ಷಿಣೆಯಿಂದ ಸಂತ್ರಸ್ತಗೊಂಡ ಕುಟುಂಬಗಳಿಗೆ ಹೋಲಿಸಿದರೆ ಅದು ಏನೇನೂ ಅಲ್ಲ. ಮದುವೆಯ ಸಂದರ್ಭದಲ್ಲಿ ಹೆಣ್ಣು ಹೆತ್ತವರು ಅಸಹಾಯಕರಂತೆ ವರ್ತಿಸುವುದೇ ವರದಕ್ಷಿಣೆ ಹಿಂಸೆ ಹೆಚ್ಚಲು ಮುಖ್ಯ ಕಾರಣ. ಮದುವೆ ಹೆಣ್ಣಿನ ಬದುಕಿನ ಮಹತ್ವದ ಘಟ್ಟ. ಇದೇ ಸಂದರ್ಭದಲ್ಲಿ ಅದಕ್ಕಾಗಿ ತನ್ನ ವ್ಯಕ್ತ್ಝಿತ್ವವನ್ನು, ಭಾವನೆಗಳನ್ನು ಸರ್ವನಾಶ ಮಾಡಿಕೊಂಡು ಪುರುಷನ ಮನೆಗೆ ಹೋಗಬೇಕಾದ ಯಾವ ಅನಿವಾರ್ಯತೆಯೂ ಹೆಣ್ಣಿಗೆ ಇರಬಾರದು. ಆ ನಿಟ್ಟಿನಲ್ಲಿ ಮಹಿಳೆಯನ್ನು ಬೆಳೆಸುವುದು ಕುಟುಂಬದ ಹೊಣೆಗಾರಿಕೆ. ಎಂತಹ ಸವಾಲನ್ನೂ ನಿಭಾಯಿಸುವ, ಎದುರಿಸುವ, ಅಂತಿಮವಾಗಿ ಪತಿಯನ್ನು ತೊರೆಯುವ ಸಂದರ್ಭದಲ್ಲಿ ಯಾವ ರೀತಿಯಲ್ಲೂ ಧೃತಿಗೆಡದೆ ಬದುಕುವ ಸಾಮರ್ಥ್ಯ ಹೆಣ್ಣು ಮಕ್ಕಳಲ್ಲೂ ಇರಬೇಕು. ಆಗ ಮಾತ್ರ ವರದಕ್ಷಿಣೆ ಕಿರುಕುಳ ಸಹಜವಾಗಿಯೇ ಇಳಿಕೆಯಾಗಬಹುದು. ಯಾಕೆಂದರೆ, ಹೆಣ್ಣಿಗಷ್ಟೇ ಪುರುಷನ ಅಗತ್ಯವಿರುವುದಲ್ಲ, ಪುರುಷನಿಗೂ ಹೆಣ್ಣಿನ ಅಗತ್ಯವಿದೆ. ಇದನ್ನು ಪುರುಷನಿಗೆ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆ ಹೆಣ್ಣು ಹೆತ್ತವರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News