ದರ್ವೇಶ್ ಪಂಗಡಕ್ಕೆ ಪ್ರವರ್ಗ-1ರಡಿಯಲ್ಲಿ ಪ್ರಮಾಣಪತ್ರ ನೀಡುವಂತೆ ಅಬ್ದುಲ್ ಅಝೀಮ್ ಪತ್ರ

Update: 2021-03-10 17:35 GMT

ಬೆಂಗಳೂರು, ಮಾ.10: ದರ್ವೇಶ್ ಅಥವಾ ದರ್ವೇಶು ಪಂಗಡಕ್ಕೆ ಪ್ರವರ್ಗ-1ರಡಿಯಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವಂತೆ ಕಂದಾಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ತಹಶೀಲ್ದಾರರಿಗೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿದ್ದರೂ, ಈ ಪಂಗಡದವರು ಪ್ರವರ್ಗ-1ರಡಿಯಲ್ಲಿ ಜಾತಿ ಪ್ರಮಾಣ ಪಡೆಯಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪ್ರವರ್ಗ-1ರಡಿಯಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವಂತೆ ಸಲಹೆ ನೀಡಿದ್ದಾರೆ.

ದರ್ವೇಶ್ ಅಥವಾ ದರ್ವೇಶು ಪಂಗಡದ ಜಾತಿ ಪ್ರಮಾಣಪತ್ರವನ್ನು ಬಯಸುವ ಅರ್ಜಿದಾರದಿಂದ ಪ್ರಮಾಣಪತ್ರದ ಜೊತೆ ಆತನ ವಂಶವೃಕ್ಷವನ್ನು ತಹಶೀಲ್ದಾರ್ ಪಡೆದುಕೊಳ್ಳಬೇಕು. ದರ್ವೇಶ್ ಅಸೋಶಿಯೇಷನ್‍ನವರು ವಿತರಿಸುವ ಪ್ರಮಾಣಪತ್ರದ ಆಧಾರದ ಜೊತೆಗೆ ಸ್ವಯಂದೃಢೀಕರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಎಂದು ಅಬ್ದುಲ್ ಅಝೀಮ್ ಸಲಹೆ ನೀಡಿದ್ದಾರೆ.

ತಹಶೀಲ್ದಾರ್‍ಗಳು ಈಗಾಗಲೆ ಹಲವಾರು ಬಗೆಯ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದಾರೆ. ಅವರ ಕಾರ್ಯದೊತ್ತಡವನ್ನು ಕಡಿಮೆ ಮಾಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೂಲಕ ಈ ಜಾತಿಪ್ರಮಾಣ ಪತ್ರಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ವಿತರಿಸಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News