ನಕಲಿ ಬಿಲ್ ಪ್ರಕರಣ: ಶಾಸಕ ಮುನಿರತ್ನ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

Update: 2021-03-10 18:04 GMT

ಬೆಂಗಳೂರು, ಮಾ.10: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿನ ಬಿಬಿಎಂಪಿ ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಗಳಿಗೆ ನಕಲಿ ಬಿಲ್‍ಗಳನ್ನು ಸೃಷ್ಟಿಸಿದ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ಈ ಸಂಬಂಧ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಪ್ರಕರಣವೇನು: 2014ರ ಡಿ.27ರಂದು ಲೋಕಾಯುಕ್ತ ಪೊಲೀಸರು ಶಾಸಕ ಮುನಿರತ್ನ ಅವರಿಗೆ ಸೇರಿದ್ದು ಎನ್ನಲಾದ ವೈಯಾಲಿಕಾವಲ್‍ನ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಆರ್.ಆರ್.ನಗರದ ಕಾಮಗಾರಿಗಳ ಟೆಂಡರ್, ನಕಲಿ ಕಾಮಗಾರಿ ಬಿಲ್, ಬಿಬಿಎಂಪಿ ಕಚೇರಿಯ ಸೀಲ್‍ಗಳು ಪತ್ತೆಯಾಗಿದ್ದವು. ಈ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಈ ಆರೋಪಪಟ್ಟಿಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಪತ್ನಿ ಮಂಜುಳಾ ಹೆಸರನ್ನು ಪೆÇಲೀಸರು ಕೈಬಿಟ್ಟಿದ್ದಾರೆ. ಕಡತಗಳು ಸಿಕ್ಕಿರುವ ವೈಯಾಲಿಕಾವಲ್ ಮನೆಯ ಪೂರ್ಣ ವಿಳಾಸ ಉಲ್ಲೇಖಿಸಿದ್ದಾರೆ. ಆದರೆ, ಆ ಮನೆಯ ಮಾಲಕ ಯಾರು ಎಂಬುದನ್ನೇ ಉಲ್ಲೇಖಿಸಿಲ್ಲ. ರಾಜಕೀಯ ಪ್ರಭಾವ ಬಳಸಿ ಶಾಸಕ ಮುನಿರತ್ನ ಅವರು ತಮ್ಮ ಹೆಸರಿಲ್ಲದಂತೆ ನೋಡಿಕೊಂಡಿದ್ದಾರೆ. ಹೀಗಾಗಿ, ಆರೋಪಿಗಳ ಪಟ್ಟಿಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಪತ್ನಿ ಹೆಸರನ್ನು ಸೇರಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಆರ್.ಆರ್.ನಗರದ ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ನಾಗರಾಜ, ಇಬ್ಬರು ಗುಮಾಸ್ತರು ಹಾಗೂ ಗುತ್ತಿಗೆದಾರರು ಸೇರಿದಂತೆ ಒಂಬತ್ತು ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News