ಹಿರಿಯ ನಾಗರಿಕರ ಕೋವಿಡ್ ಲಸಿಕಾ ಅಭಿಯಾನ: ರಕ್ಷಾ ಸಹಾಯವಾಣಿ ಆರಂಭಿಸಿದ ಸಂಸದ ತೇಜಸ್ವಿ ಸೂರ್ಯ

Update: 2021-03-13 12:56 GMT

ಬೆಂಗಳೂರು, ಮಾ. 13: ಮಹತ್ವಾಕಾಂಕ್ಷಿ ಕೋವಿಡ್-19 ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ‘ಕೋವಿಡ್ ರಕ್ಷಾ' ವೇದಿಕೆ ಆರಂಭಿಸಿದ್ದು, ಸಹಾಯವಾಣಿ 080-6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಹತ್ತಿರದ ಆಸ್ಪತ್ರೆ/ಕೇಂದ್ರದಲ್ಲಿ ಹಿರಿಯ ನಾಗರಿಕರ ಲಸಿಕಾ ನೋಂದಣಿಗೆ ಸಹಾಯ, ತಜ್ಞ ವೈದ್ಯರಿಂದ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಇತರ ಸ್ವಯಂಸೇವಕರ ತಂಡದೊಂದಿಗೆ ‘ಕೋವಿಡ್ ರಕ್ಷಾ' ವೇದಿಕೆಯ ಮೂಲಕ ಕಾಲ್‍ಸೆಂಟರ್ ನ್ನು ಪ್ರಾರಂಭಿಸಿದ್ದು, ಈ ಸಹಾಯವಾಣಿಗೆ ಬರುವ ಕರೆಗಳ ಆಧಾರದಲ್ಲಿ ಲಸಿಕಾ ನೋಂದಣಿ ಕಾರ್ಯ ನಡೆಸಲಿದೆ. ಇದರನ್ವಯ, ಹಿರಿಯ ನಾಗರಿಕರಿಗೆ ಹತ್ತಿರದ ಆಸ್ಪತ್ರೆ/ಕೇಂದ್ರದಲ್ಲಿ ಲಸಿಕಾ ನೋಂದಣಿ, ಅಸ್ವಸ್ಥ ನಾಗರಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಲಸಿಕೆ ಪಡೆದುಕೊಂಡ ನಂತರ ತಜ್ಞ ವೈದ್ಯರಿಂದ ಸಲಹೆ, ಸಮಾಲೋಚನೆಗೆ ಕ್ರಮ ಕೈಗೊಳ್ಳಲಾಗಿದೆ.

‘ಕೋವಿಡ್ ರಕ್ಷಾ' ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, ‘ಮೋದಿ ನೇತೃತ್ವದ ಸರಕಾರದ ವತಿಯಿಂದ ಆರಂಭವಾಗಿರುವ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಅನ್ವಯ ಈಗಾಗಲೇ 50 ಲಕ್ಷಕ್ಕೂ ಅಧಿಕ ನಾಗರಿಕರು ಕೆಲವೇ ದಿನಗಳಲ್ಲಿ ಲಸಿಕೆ ಪಡೆದುಕೊಂಡಿದ್ದು, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಲಸಿಕೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವೇದಿಕೆ ಆರಂಭಿಸಲಾಗಿದೆ.

ಕೋವಿನ್ ಅಪ್ಲಿಕೇಶನ್ ಅಥವಾ ಆರೋಗ್ಯ ಸೇತು ಜಾಲತಾಣದ ಮೂಲಕ ನೋಂದಣಿಗೊಳ್ಳಲು ಇದರಿಂದ ಸಹಾಯ ಒದಗಿಸಲಿದ್ದು, ಲಸಿಕೆ ಪಡೆದುಕೊಂಡ ನಂತರವೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರ ಲಸಿಕಾ ಅನುಕೂಲಕ್ಕಾಗಿ ಪಕ್ಷದ ಕಾರ್ಯಕರ್ತರು, ಸ್ವಯಂ ಸೇವಕರ ಸಹಾಯದೊಂದಿಗೆ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಆರಂಭಿಸುವಂತೆ ಸೂಚಿಸಿರುತ್ತಾರೆ. ಸದ್ಯದಲ್ಲೇ ಎಲ್ಲ ಆಸ್ಪತ್ರೆ/ ಪಾರ್ಕ್ ಗಳ ಹತ್ತಿರದಲ್ಲಿಯೂ ನೋಂದಣಿ ಡೆಸ್ಕ್ ಅನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.

‘ಕೋವಿಡ್ ರಕ್ಷಾ' ವೇದಿಕೆಯನ್ನು 100ಕ್ಕೂ ಅಧಿಕ ವೈದ್ಯರ ಹಾಗೂ 200ಕ್ಕೂ ಅಧಿಕ ಸ್ವಯಂಸೇವಕರ ತಂಡದೊಂದಿಗೆ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಹಾಗೂ ನಂತರದ ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು. ಮೊದಲ ಹಂತದ ಕಾರ್ಯಾಚರಣೆಯಲ್ಲಿ ‘ಕೋವಿಡ್ ರಕ್ಷಾ' ವೇದಿಕೆಯ ಮೂಲಕ 10,700 ಕರೆಗಳಿಗೆ ಉತ್ತರಿಸಿದ್ದು, 3,465 ಸಮಾಲೋಚನೆಗಳನ್ನು ವಾಟ್ಸಾಪ್ ಮುಖಾಂತರ ನಿರ್ವಹಿಸಲಾಗಿದೆ. 582 ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ, 96 ಕೇಸ್‍ಗಳ ತುರ್ತುಪರಿಹಾರ ಕಾರ್ಯವನ್ನು ಮಾಡಲಾಗಿದೆ. ಟೆಲಿ ಸಮಾಲೋಚನೆ ಮೂಲಕ 1,698 ಜನ ಕೋವಿಡ್-19 ಗುಣಲಕ್ಷಣಗಳನ್ನು ಹೊಂದಿರುವ ನಾಗರಿಕರ ಪರಾಮರ್ಶೆ ನಡೆಸಲಾಗಿದೆ ಎಂದು ತೇಜಸ್ವಿ ಸೂರ್ಯ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News