×
Ad

ಯಾವ ಆಯೋಗವೂ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಶಿಫಾರಸ್ಸು ಮಾಡಿಲ್ಲ: ಪ್ರೊ.ರವಿವರ್ಮಕುಮಾರ್

Update: 2021-03-14 18:40 IST

ಬೆಂಗಳೂರು, ಮಾ. 14: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಸಮೀಕ್ಷೆಗೆ ರಚನೆಯಾದ ನಾಗಣ್ಣಗೌಡ ಸಮಿತಿ, ಎಲ್.ಜಿ.ಹಾವನೂರ್ ಆಯೋಗ, ಟಿ.ವೆಂಕಟಸ್ವಾಮಿ ಆಯೋಗ, ಚಿನ್ನರೆಡ್ಡಿ ಆಯೋಗವು ಲಿಂಗಾಯತ ಸಮುದಾಯವನ್ನು ಹಿಂದುಳಿದ ಸಮುದಾಯಗಳ ಮಾನದಂಡದಿಂದ ಹೊರಗಿಟ್ಟಿವೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ತಿಳಿಸಿದ್ದಾರೆ.

ರವಿವಾರ ದಲಿತ ಸಂಘಟನೆಗಳ ಒಕ್ಕೂಟ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ದಲಿತ, ಹಿಂದುಳಿದ ಮತ್ತು ಪ್ರಗತಿಪರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಆಯೋಗಗಳು ಲಿಂಗಾಯತ ಸಮುದಾಯವನ್ನು ಮೀಸಲಾತಿ ಪಟ್ಟಿಗೆ ಶಿಫಾರಸು ಮಾಡದಿದ್ದರೂ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲಾಯಿತು. 1989ರಲ್ಲಿ ರಚನೆಯಾದ ಚಿನ್ನರೆಡ್ಡಿ ಆಯೋಗವು ಲಿಂಗಾಯತರನ್ನು ಮುಂದುವರಿದ ಸಮುದಾಯವೆಂದು ಅಂಕಿ-ಅಂಶಗಳ ಪ್ರಕಾರವಾಗಿ ವರದಿ ಸಲ್ಲಿಸಿದೆ. ಆದರೆ, ಸರಕಾರ ಯಾವ ಆಯೋಗಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ವಿಷಾದಿಸಿದ್ದಾರೆ.

ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಮಾತ್ರ ಮೀಸಲಾತಿ ಒದಗಿಸಲು ಅವಕಾಶವಿದೆಯೇ ಹೊರತು ಆರ್ಥಿಕ ಹಿಂದುಳಿದಿರುವಿಕೆ ಮೀಸಲಾತಿ ಕಲ್ಪಿಸಲು ಮಾನದಂಡವಲ್ಲ ಎಂದು ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ನ ತೀರ್ಪುಗಳು ಸ್ಪಷ್ಟವಾಗಿ ಉಲ್ಲೇಖಿಸಿವೆ. ಆದಾಗ್ಯು ಮೇಲ್ಜಾತಿಗಳ ಹಿತಾಸಕ್ತಿಗಾಗಿ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿ, ಮೀಸಲಾತಿಯ ನಿಜವಾದ ಆಶಯಗಳಿಗೆ ಕೊಡಲಿಪೆಟ್ಟು ನೀಡುವುದಕ್ಕಾಗಿ ಮೇಲ್ಜಾತಿಗಳಿಗೆ ಮೀಸಲಾತಿ ಜಾರಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸುತ್ತಾರೆ. ಈ ಅಧಿಕಾರವನ್ನು ಹಿಂದುಳಿದ ಸಮುದಾಯದ ಏಳ್ಗೆಗಾಗಿ ಸದುಪಯೋಗ ಪಡಿಸಿಕೊಂಡ ಎಲ್.ಜಿ.ಹಾವನೂರ್, ಶೇ.44ರಷ್ಟಿರುವ ಜನಸಂಖ್ಯೆಯನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾವನೂರ್ ವರದಿಯನ್ನು ಪ್ರತಿಗಳನ್ನು ಸುಟ್ಟುಹಾಕಿ, ಹಾವನೂರ್ ಗೆ ಜೀವ ಬೆದರಿಕೆ ಹಾಕುತ್ತಾರೆ. ಆದರೂ, ದೇವರಾಜು ಅರಸು, ಹಾವನೂರ್ ವರದಿಯನ್ನು ಜಾರಿಗೊಳಿಸಲು ಯಶಸ್ವಿಯಾದರೆಂದು ಅವರು ತಿಳಿಸಿದ್ದಾರೆ.

ಹಾವನೂರ್ ಆಯೋಗದ ವರದಿಯನ್ನು ಸುಟ್ಟು ಹಾಕಿದವರು, ಮಂಡಲ್ ವರದಿಯ ವಿರುದ್ಧ ಬೀದಿಗಳಲ್ಲಿ ಹೋರಾಟ ನಡೆಸಿದ ಸಮುದಾಯವೇ ಇವತ್ತು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟವು ಮೀಸಲಾತಿಯ ಮೂಲಸ್ವರೂಪವನ್ನೇ ಬುಡಮೇಲು ಮಾಡುವಂತಹದ್ದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಿರಿಯ ಲೇಖಕ ಪ್ರೊ.ಎನ್.ವಿ.ನರಸಿಂಹಯ್ಯ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೇಲ್ಜಾತಿಗಳ ಪ್ರಾಧ್ಯಾಪಕರು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಮಂಡಲ್ ವರದಿ ಜಾರಿ ವಿರುದ್ಧ ಪ್ರತಿಭಟನೆ ಆಯೋಜಿಸಿದವು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮಂಡಲ್ ಆಯೋಗದ ವರದಿ ಕುರಿತು ಜಾಗೃತಿ ಮೂಡಿಸಿ ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸಿದವು ಎಂದು ಸ್ಮರಿಸಿದ್ದಾರೆ.

ಈಗ ಮೇಲ್ಜಾತಿಗಳು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿಯುವಂತಹ ಷಡ್ಯಂತ್ರವನ್ನು ರೂಪಿಸಿದೆ. ಈ ಬಗ್ಗೆ ದಲಿತ ಸಂಘಟನೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದದ್ದು. ಈ ಸಂಬಂಧ ದಲಿತ ಸಂಘಟನೆಗಳ ಒಕ್ಕೂಟ ತೆಗೆದುಕೊಳ್ಳುವ ನಿರ್ಣಯಗಳನ್ನು ಹಿಂದುಳಿದ ಸಮುದಾಯ ಸಂಪೂರ್ಣವಾಗಿ ಬೆಂಬಲಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಈ ಸಭೆಯಲ್ಲಿ ದಸಂಸ ಸಂಚಾಲಕರಾದ ಮಾವಳ್ಳಿ ಶಂಕರ್, ವಿ.ನಾಗರಾಜ್, ಲಕ್ಷ್ಮಿನಾರಾಯಣ್ ನಾಗವಾರ, ಲೇಖಕರಾದ ವಿಕಾಸ್ ಆರ್.ಮೌರ್ಯ, ಉಪನ್ಯಾಸಕ ಹುಲಿಕುಂಟೆ ಮೂರ್ತಿ, ವಕೀಲ ಡಾ. ರಾಜಾನಾಯ್ಕ್, ಎಣ್ಣೆಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ವೀರಪ್ಪಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.73ಕ್ಕೆ ಏರಿಕೆ ಮಾಡಿ ಕಾನೂನು ರೂಪಿಸಲಾಗಿತ್ತು. ಆದರೆ, ಇದರ ವಿರುದ್ಧ ನ್ಯಾಯಾಲಯದಲ್ಲಿ ಇದಕ್ಕೆ ತಡೆಯಾಜ್ಞೆಯಾಗಿತು. ಅಲ್ಲದೆ, ಸುಪ್ರೀಂ ಕೋರ್ಟ್, ಮೀಸಲಾತಿ ಪ್ರಮಾಣ ಶೇ.75ರಷ್ಟು ಏರಿಕೆ ಮಾಡುವ ಸಂಬಂಧ ಸೂಕ್ತ ಮಾಹಿತಿ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸುತ್ತಾ ಬರುತ್ತಿದ್ದು, ಸರಕಾರಗಳು ಇದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಆದರೆ, ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಮಾಡಲಾದ ಜಾತಿಗಣತಿ ವರದಿಯಲ್ಲಿ ಸುಪ್ರೀಂಕೋರ್ಟ್ ಪ್ರಶ್ನೆಗೆ ಸ್ಪಷ್ಟ ಉತ್ತರವಿದೆ. ಹೀಗಾಗಿ ನಾವು ಜಾತಿವಾರು ಜನಸಂಖ್ಯಾ ಸಮೀಕ್ಷೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕಾಗಿದೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲೂ ಮೀಸಲಾತಿ ಜಾರಿಗೊಳಿಸುವ ಸಂಬಂಧ ಹೋರಾಟವನ್ನು ರೂಪಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ನಮ್ಮ ಹೋರಾಟಗಳ ವಿಫಲತೆಗೆ ನಾವೇ ಕಾರಣರಾಗುತ್ತೇವೆ'

-ಪ್ರೊ.ರವಿವರ್ಮ ಕುಮಾರ್, ಮಾಜಿ ಅಡ್ವಕೇಟ್ ಜನರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News