ಪಂಚಮಸಾಲಿ ಸಮುದಾಯ 2ಎ ಪಟ್ಟಿಗೆ ಸೇರ್ಪಡೆ ಬೇಡ: ಎಂ.ಡಿ.ಲಕ್ಷ್ಮಿನಾರಾಯಣ

Update: 2021-03-14 16:42 GMT

ಬೆಂಗಳೂರು, ಮಾ.14: ಹಿಂದುಳಿದ ಸಮುದಾಯಗಳಿಗೆ ಮೀಸಲಾಗಿರುವ 2ಎ ಮೀಸಲಾತಿ ಪಟ್ಟಿಗೆ ಪಂಚಮಸಾಲಿ ಸಮುದಾಯವನ್ನು ಯಾವುದೇ ಕಾರಣಕ್ಕೂ ಸೇರಿಸಬಾರದೆಂದು ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಒತ್ತಾಯಿಸಿದ್ದಾರೆ.

ರವಿವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 2ಎ ಮೀಸಲಾತಿ ಯತಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ನಡೆದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಬಲ ಸಮುದಾಯಗಳು 2ಎ ಮೀಸಲಾತಿಗೆ ಸೇರ್ಪಡೆ ಆಗುವುದರಿಂದ ಹಿಂದುಳಿದ ವರ್ಗಗಳ ಪಟ್ಟಯಲ್ಲಿರುವ ಕೆಳ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ಸಮುದಾಯದ ಮುಖಂಡ ಸೈದಪ್ಪ ಗುತ್ತಿದಾರ್ ಮಾತನಾಡಿ, ಹಿಂದುಳಿದ ವರ್ಗಗಳ 2ಎ ಪ್ರವರ್ಗದಲ್ಲಿ 362 ಜಾತಿಗಳು ಬರಲಿದ್ದು, ಇದುವರೆಗೂ ಕೇವಲ ಒಂದೆರಡು ಪ್ರಬಲ ಸಮುದಾಯಗಳು ಶೇ.15ರಷ್ಟು ಮೀಸಲಾತಿಯಲ್ಲಿ ಲಾಭ ಪಡೆದಿವೆ. ಈ ಪಟ್ಟಿಯಲ್ಲಿ ಇನ್ನು ಹಲವು ಕೆಳ ಹಂತದ ಜಾತಿಗಳು ಅವಕಾಶದಿಂದ ವಂಚಿತವಾಗಿದೆ. ಈಗ 2ಎ ಪಟ್ಟಿಗೆ ಪ್ರಬಲ ಜಾತಿಗಳು ಸೇರ್ಪಡೆಯಾದರೆ, ತೀರ ಹಿಂದುಳಿದ ಜಾತಿಗಳು ನಗಣ್ಯವಾಗಲಿವೆ ಎಂದು ಎಚ್ಚರಿಸಿದ್ದಾರೆ.

ಸಭೆಯಲ್ಲಿ ಹಿಂದುಳಿದ ಸಮುದಾಯದ ಮುಖಂಡ ಮಂಜುನಾಥ್ ಲಕ್ಷ್ಮಣ ನಾಯ್ಕ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮತ್ತಿತರರಿದ್ದರು.

‘ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 300ಕ್ಕೂ ಹೆಚ್ಚು ಜಾತಿಗಳಿವೆ. ಈ ಜಾತಿ ಸಮುದಾಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದಿ 2021-22ನೇ ಆಯವ್ಯಯದಲ್ಲಿ ಹಿಂದುಳಿದ ಸಮುದಾಯಕ್ಕೆ ಕೇವಲ 500 ಕೋಟಿ ರೂ.ನೀಡಿರುವುದು ಸರಿಯಲ್ಲ. ಈ ಮೊತ್ತವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕು'

-ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯಾಧ್ಯಕ್ಷ, ಹಿಂದುಳಿದ ವರ್ಗಗಳ ಘಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News