ನಿಮಗೆ ಗೊತ್ತಿರಲಿ, ಆದಾಯ ತೆರಿಗೆಯ ಈ ಐದು ನಿಯಮಗಳು ಎ.1ರಿಂದ ಬದಲಾಗಲಿವೆ

Update: 2021-03-14 18:49 GMT

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ ಸಂದರ್ಭದಲ್ಲಿ ವೇತನದಾರ ವರ್ಗದವರಿಗೆ ಕೊಂಚ ನೆಮ್ಮದಿಯನ್ನು ನೀಡಲು ನೂತನ ಸರಳೀಕೃತ ಆದಾಯ ತೆರಿಗೆ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ. ವೇತನದಾರ ವರ್ಗದವರ ಮೇಲೆ ಪರಿಣಾಮವನ್ನುಂಟು ಮಾಡಬಲ್ಲ ಈ ಆದಾಯ ತೆರಿಗೆ ಬದಲಾವಣೆಗಳು 2021,ಎ.1ರಿಂದ ಜಾರಿಗೊಳ್ಳಲಿವೆ. ಈ ಕುರಿತು ಮಾಹಿತಿಗಳಿಲ್ಲಿವೆ.....

*ಭವಿಷ್ಯನಿಧಿ ದೇಣಿಗೆ:

ಉದ್ಯೋಗಿಗಳು ಭವಿಷ್ಯ ನಿಧಿ (ಇಪಿಎಫ್)ಗೆ ಪಾವತಿಸುವ 2.50 ಲ.ರೂ.ಗೂ ಹೆಚ್ಚಿನ ವಾರ್ಷಿಕ ವಂತಿಗೆಯ ಮೇಲಿನ ಬಡ್ಡಿಗೆ ಎ.1ರಿಂದ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. ಇಪಿಎಫ್ ನೌಕರರ ಕಲ್ಯಾಣದ ಉದ್ದೇಶವನ್ನು ಹೊಂದಿದೆ ಮತ್ತು ಮಾಸಿಕ ಎರಡು ಲ.ರೂ.ಗಿಂತ ಕಡಿಮೆ ಗಳಿಸುವ ವ್ಯಕ್ತಿಗೆ ಈ ಪ್ರಸ್ತಾವದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸೀತಾರಾಮನ್ ತಿಳಿಸಿದ್ದಾರೆ.

* ಪ್ರಿ-ಫಿಲ್ಡ್ ಐಟಿಆರ್ ಫಾರ್ಮ್‌ಗಳು

 ವ್ಯಕ್ತಿಗತ ತೆರಿಗೆದಾರರಿಗೆ ಪ್ರಿ-ಫಿಲ್ಡ್ ಅಂದರೆ ಮೊದಲೇ ತುಂಬಲಾದ ಆದಾಯ ತೆರಿಗೆ ರಿಟರ್ನ್(ಐಟಿಆರ್)ನ ನಮೂನೆಗಳನ್ನು ವಿತರಿಸಲಾಗುವುದು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ. ಪ್ರಿ-ಫಿಲ್ಡ್ ನಮೂನೆಗಳಲ್ಲಿ ತೆರಿಗೆದಾತರ ಆದಾಯ ಮತ್ತು ಇತರ ಪ್ರಮುಖ ವಿವರಗಳು ಆಟೋಮ್ಯಾಟಿಕ್ ಆಗಿ ಅಪ್‌ಲೋಡ್ ಆಗಿರುತ್ತವೆ.

* ಎಲ್‌ಟಿಸಿ ಸ್ಕೀಮ್

 2021-22ರ ಕೇಂದ್ರ ಮುಂಗಡಪತ್ರದಲ್ಲಿ ಲೀವ್ ಟ್ರಾವೆಲ್ ಕನ್ಸೆಷನ್ (ಎಲ್‌ಟಿಸಿ) ನಗದು ವೋಚರ್ ಯೋಜನೆಯನ್ನು ಅಧಿಸೂಚಿಸಲಾಗಿದೆ. ಬಳಕೆದಾರರ ಬೇಡಿಕೆಯನ್ನು ಹೆಚ್ಚಿಸಲು ಮತ್ತು ಕೋವಿಡ್ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಎಂದಿನ ಎಲ್‌ಟಿಸಿ ತೆರಿಗೆ ಲಾಭದ ಹಕ್ಕು ಮಂಡಿಸಲು ಸಾಧ್ಯವಾಗದ ವ್ಯಕ್ತಿಗಳಿಗೆ ತೆರಿಗೆ ಲಾಭವನ್ನೊದಗಿಸಲು ಕೇಂದ್ರವು ಕಳೆದ ವರ್ಷ ಈ ಯೋಜನೆಯನ್ನು ಪ್ರಕಟಿಸಿತ್ತು.

* ಹೆಚ್ಚಿನ ದರದಲ್ಲಿ ಟಿಡಿಎಸ್

ಆದಾಯ ತೆರಿಗೆ ರಿಟರ್ನ್ ಸಲ್ಲಿಸದ ವ್ಯಕ್ತಿಗಳಿಗೆ ಅಧಿಕ ದರದಲ್ಲಿ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್)ಕ್ಕೆ ಅವಕಾಶವನ್ನು ಕಲ್ಪಿಸುವ ನೂತನ ಕಲಂ 206ಎಬಿ ಎ.1ರಿಂದ ಆದಾಯ ತೆರಿಗೆ ಕಾಯ್ದೆಯಲ್ಲಿ ಸೇರ್ಪಡೆಗೊಳ್ಳಲಿದೆ.

* 75 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು ಐಟಿಆರ್ ಸಲ್ಲಿಸಬೇಕಿಲ್ಲ

75 ವರ್ಷಕ್ಕೆ ಮೇಲ್ಪಟ್ಟ,ಒಂದೇ ಬ್ಯಾಂಕಿನಲ್ಲಿ ಪಿಂಚಣಿ ಆದಾಯ ಮತ್ತು ನಿರಖು ಠೇವಣಿಗಳನ್ನು ಹೊಂದಿರುವ ಹಿರಿಯ ನಾಗರಿಕರು ಕೇವಲ ಬಡ್ಡಿ ಆದಾಯವನ್ನು ಹೊಂದಿದ್ದರೆ ಅವರು ಎ.1ರಿಂದ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಬೇಕಿಲ್ಲ. ಅವರು ಪಾವತಿಸಬೇಕಿರುವ ಆದಾಯ ತೆರಿಗೆಯನ್ನು ಬ್ಯಾಂಕ್ ಅವರ ಖಾತೆಯಿಂದ ಕಡಿತಗೊಳಿಸಿ ಸರಕಾರಕ್ಕೆ ಜಮಾ ಮಾಡುತ್ತದೆ. ವ್ಯಕ್ತಿಯು ಪಿಂಚಣಿ ಆದಾಯವನ್ನು ಮಾತ್ರ ಹೊಂದಿರಬೇಕು ಮತ್ತು ನಿರಖು ಠೇವಣಿಯ ಮೇಲಿನ ಬಡ್ಡಿ ಅದೇ ಬ್ಯಾಂಕಿನಲ್ಲಿ ಜಮಾಗೊಂಡಿರಬೇಕು ಎನ್ನುವ ಷರತ್ತನ್ನು ಈ ಸೌಲಭ್ಯವು ಹೊಂದಿದೆ.

ಕೃಪೆ:india.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News