×
Ad

ಹೆಚ್ಚುತ್ತಿರುವ ಕೋವಿಡ್: ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Update: 2021-03-15 20:15 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.15: ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ 13ನೇ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಪ್ರಕಟನೆ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಾ.24ರಿಂದ 31ರವರೆಗೆ 13ನೆ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ದಿನಾಂಕ ಘೋಷಿಸಲಾಗಿತ್ತು. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ, ಚಟುವಟಿಕೆಗಳು ಆರಂಭಗೊಂಡಿದ್ದವು. ಆದರೆ, ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದಾಗಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಗೆ ಚಲನಚಿತ್ರೋತ್ಸವ ಸಂಘಟಿಸುವ ಕುರಿತು ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಅಕಾಡೆಮಿ ಪತ್ರ ಬರೆದಿದ್ದು, ಅವರ ಸೂಚನೆ ಅನ್ವಯ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದಾಗಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲು ಹೇಳಿದೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಸೋಮವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚಲನಚಿತ್ರೋತ್ಸವವನ್ನು ಅನಿರ್ದಿಷ್ಟಾವಧಿವರೆಗೆ ಮುಂಡೂಡುವ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿರುವ ಅವರು, ಕೋವಿಡ್ ಸೋಂಕಿನ ಜಾಗತಿಕ ಪರಿಣಾಮ ಮತ್ತು ಎರಡನೆ ಅಲೆ ಕುರಿತು ಅವಲೋಕನ ಪ್ರತಿದಿನ ನಡೆಯುತ್ತಿದ್ದು, ತಜ್ಞರ ಸಲಹೆ ಪಡೆದುಕೊಂಡು ಶೀಘ್ರದಲ್ಲಿಯೇ 13ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News