×
Ad

ಕುರ್‌ಆನ್ ಪರಿಷ್ಕರಣೆ ಮಾಡುವಂತೆ ಹೇಳಿಕೆ ಆರೋಪ: ವಸೀಮ್ ರಿಝ್ವಿ ವಿರುದ್ಧ ಉಲಮಾಗಳ ನಿಯೋಗ ದೂರು

Update: 2021-03-15 22:13 IST

ಬೆಂಗಳೂರು, ಮಾ.15: ಪವಿತ್ರ ಕುರ್‌ಆನ್‍ನಲ್ಲಿರುವ 26 ಶ್ಲೋಕಗಳನ್ನು ತೆಗೆದು ಹಾಕುವಂತೆ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಸೀಮ್ ರಿಝ್ವಿ ವಿರುದ್ಧ ಯುಎಪಿಎ ಸೇರಿದಂತೆ ಇನ್ನಿತರ ಕಾಯ್ದೆಗಳಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮೂಲಕ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಉಲಮಾಗಳ ನಿಯೋಗ ದೂರು ಸಲ್ಲಿಸಿದೆ.

ಸೋಮವಾರ ಇನ್‍ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿ ಮಾಡಿದ ಉಲಮಾಗಳ ನಿಯೋಗವು, ಅಮೀರೆ ಶರೀಅತ್ ಕರ್ನಾಟಕ ಹಝ್ರತ್ ಮೌಲಾನ ಸಗೀರ್ ಅಹ್ಮದ್ ರಶಾದಿ ನೇತೃತ್ವದಲ್ಲಿ ಸಿದ್ಧಪಡಿಸಿರುವ ದೂರನ್ನು ಹಸ್ತಾಂತರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಪವಿತ್ರ ಕುರ್‌ಆನ್ ಸರ್ವಶಕ್ತನಾದ ಅಲ್ಲಾಹನ ಮೂಲಕ ಪ್ರವಾದಿ ಮುಹಮ್ಮದ್(ಸ) ಅವರಿಗೆ ಬೋಧಿಸಲ್ಪಟ್ಟಿರುವುದು ಎಂಬುದು ಪ್ರತಿಯೊಬ್ಬ ಮುಸ್ಲಿಮನ ಅಚಲ ನಂಬಿಕೆಯಾಗಿದೆ. ಮಾನವೀಯತೆ, ಸಮಾನತೆ, ಸಹೋದರತ್ವ ಹಾಗೂ ಪ್ರೀತಿಯ ಸಂದೇಶವನ್ನು ಕುರ್‌ಆನ್ ಸಾರುತ್ತದೆಯೇ ಹೊರತು, ಹಿಂಸೆ ಹಾಗೂ ದ್ವೇಷವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಿರುವ ಎರಡು ಪಂಗಡಗಳ ನಡುವೆ ಹಾಗೂ ಸಂಘರ್ಷ ಉಂಟಾಗಲಿ, ಅವರು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಲಿ ಎಂಬ ದುರುದ್ದೇಶದಿಂದಲೆ ವಸೀಮ್ ರಿಝ್ವಿ ಇಂತಹ ಕೆಲಸಕ್ಕೆ ಹಾಕಿರಬಹುದು. ಆದುದರಿಂದ, ಈತನ ವಿರುದ್ಧ ಐಪಿಸಿ ಸೆಕ್ಷನ್ 153ಎ, 295ಎ, 120ಬಿ ಹಾಗೂ 1967ರ ಯುಎಪಿಎ ಕಾಯ್ದೆಯ ಸೆಕ್ಷನ್ 15, 16 ಹಾಗೂ 18ರಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಲಮಾಗಳ ನಿಯೋಗ ಆಗ್ರಹಿಸಿದೆ.

ನಿಯೋಗದಲ್ಲಿ ಅಂಜುಮನ್ ಎ ಇಮಾಮಿಯಾ ಅಧ್ಯಕ್ಷ ಮೀರ್ ಅಲಿ ರಝಾ ನಜಾಫಿ, ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಮೌಲಾನ ಮುಹಮ್ಮದ್ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಸೈಯದ್ ಝುಲ್ಫಿಕರ್ ನೂರಿ, ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಶುದ್ದೀನ್ ಬಜ್ಲಿ ಖಾಸ್ಮಿ, ಮೌಲಾನ ಶೇಖ್ ಅಬ್ದುಲ್ ಅಝೀಮ್ ಮದನಿ, ಮೌಲಾನ ಅಬ್ದುಲ್ ಖಾದಿರ್ ಶಾ ವಾಜೀದ್, ಮೌಲಾನ ಅಬ್ದುಲ್ ರಹೀಮ್ ರಶಾದಿ ಖಾಸ್ಮಿ, ಸೈಯದ್ ಶಾಹಿದ್, ಸೈಯದ್ ಸರ್ದಾರ್, ಮುಝಫ್ಫರ್ ಅಹ್ಮದ್, ಹಾಫಿಜ್ ಎಲ್.ಮುಹಮ್ಮದ್ ಫಾರೂಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News