ಸಂವಿಧಾನ ರಕ್ಷಿಸಿದರಷ್ಟೇ ದೇಶ ಉಳಿದೀತು

Update: 2021-03-16 05:19 GMT

ಭಾರತೀಯ ಸಂವಿಧಾನ ಅಂಬೇಡ್ಕರ್‌ರವರ ವಿದ್ವತ್ತು ಮತ್ತು ಮುತ್ಸದ್ದಿತನಗಳನ್ನು ಮೂಲಭೂತವಾಗಿ ಪ್ರತಿನಿಧಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪೂರಕವಾಗಿರುವ ಸಂವಿಧಾನವನ್ನು ವಿಸ್ತೃತವಾಗಿ ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಅಂಬೇಡ್ಕರ್ ಸಂವಿಧಾನವನ್ನು ಕುರಿತ ಸ್ವತಂತ್ರ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳು ಭಾರತೀಯರ ಬಿಡುಗಡೆಯ ಮಾರ್ಗಗಳು ಎಂದು ಪ್ರತಿಪಾದಿಸಿದ್ದರು. ಭಾರತೀಯ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮೂಲಭೂತವಾದ ಸುಧಾರಣೆ ಮತ್ತು ಸಮಾನತೆಗಳನ್ನು ಸಾಧಿಸುವ ಸಲುವಾಗಿ ಅಂಬೇಡ್ಕರ್ ಸಂವಿಧಾನದ ಮೂಲತತ್ವಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿದ್ದಾರೆ. ಪುರೋಹಿತಶಾಹಿ ರೂಪಿಸಿದ ಜಾತಿವ್ಯವಸ್ಥೆ ಮತ್ತು ಬಂಡವಾಳಶಾಹಿ ರೂಪಿಸಿದ ಅರ್ಥವ್ಯವಸ್ಥೆಗಳನ್ನು ಆಮೂಲಾಗ್ರವಾಗಿ ಬದಲಿಸಿ ದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ನೀಡಿದ ಸಾಂವಿಧಾನಿಕ ಕೊಡುಗೆಗಳು ಅಮೂಲ್ಯವಾಗಿವೆ.

ಅಂಬೇಡ್ಕರ್ ಮಹಿಳೆಯರು ಮತ್ತು ಶೋಷಿತ ಜನವರ್ಗಗಳು ರಾಜ್ಯಾಧಿಕಾರವನ್ನು ಹಿಡಿದು ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬಯಸಿದ್ದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಅಂಬೇಡ್ಕರ್‌ರವರ ರಾಜಕೀಯ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆದರ್ಶಗಳಾಗಿವೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಾತೃತ್ವದಿಂದಲೇ ಎಲ್ಲ ಪ್ರಜೆಗಳು ಸಮಾನರಾಗಿ ಸುರಕ್ಷಿತವಾಗಿ ಬದುಕಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸಮಾನ ಹಕ್ಕು ಬಾಧ್ಯತೆಗಳನ್ನುಳ್ಳ ಪ್ರಜೆಗಳು ರೂಪುಗೊಂಡಾಗ ಮಾತ್ರ ಭಾರತವು ಸರ್ವಸ್ವತಂತ್ರ ಗಣರಾಜ್ಯವಾಗುತ್ತದೆ ಎಂದು ಅಂಬೇಡ್ಕರ್ ಆಶಿಸಿದ್ದರು. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ಹಲವಾರು ಪ್ರಗತಿಶೀಲ ಆಶಯಗಳು ಮತ್ತು ಅನುಚ್ಛೇದಗಳನ್ನು ಒಳಗೊಂಡಿದೆ. ಆದರೆ ಇದುವರೆಗೂ ಕೂಡ ಜಾತಿವಿನಾಶಗೊಂಡು ಪ್ರಬುದ್ಧ ಭಾರತ ನಿರ್ಮಾಣಗೊಂಡಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಪ್ರಜ್ಞೆಯನ್ನು ಆಧರಿಸಿದ ಪ್ರಜಾಸತ್ತಾತ್ಮಕ ಚಿಂತನೆಗಳು ಮತ್ತು ಹೋರಾಟಗಳು ಭಾರತದಲ್ಲಿ ವಿಶೇಷ ಮಹತ್ವ ಹೊಂದಿದೆ. ಇತ್ತೀಚೆಗೆ ನಮ್ಮನ್ನಾಳುತ್ತಿರುವವರು ಬ್ರಾಹ್ಮಣಶಾಹಿಯನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಮನು ಸಂವಿಧಾನವನ್ನು ಮತ್ತೆ ಭಾರತೀಯರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿರುವುದನ್ನು ಪ್ರಜ್ಞಾವಂತ ಭಾರತೀಯರು ಪ್ರಬಲವಾಗಿ ವಿರೋಧಿಸಿ ಅಂಬೇಡ್ಕರ್ ಸಂವಿಧಾನವನ್ನು ಉಳಿಸುವುದರ ಮೂಲಕ ಭಾರತದ ಗಣತಂತ್ರವನ್ನು ರಕ್ಷಿಸಬೇಕು.

ಧರ್ಮ ಮತ್ತು ಸಂಪತ್ತುಗಳು ಶಕ್ತಿ ರಾಜಕಾರಣದ ಮೂಲವಾಗಿದ್ದು ಅಂಬೇಡ್ಕರ್ ಪ್ರತಿಪಾದಿಸಿದ ಮುಕ್ತಿ ರಾಜಕಾರಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಹುದೊಡ್ಡ ಅಡ್ಡಗಲ್ಲುಗಳಾಗಿವೆ. ‘‘ನಮ್ಮ ಎಲ್ಲ ಗಮನವನ್ನು ನಮ್ಮ ದೇಶದ ರಾಜಕೀಯ ಸ್ವಾತಂತ್ರ್ಯದ ಮೇಲೆ ಮಾತ್ರ ಕೇಂದ್ರೀಕರಿಸುತ್ತಾ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದಂತಹ ಅದಕ್ಕಿಂತ ಗಂಭೀರವಾದ ಸಮಸ್ಯೆಗಳನ್ನು ಕಡೆಗಣಿಸುವುದು ಸಂಪೂರ್ಣವಾಗಿ ತಪ್ಪು. ರಾಜಕೀಯ ಸ್ವಾತಂತ್ರ್ಯವೇ ನಿಜವಾದ ಮತ್ತು ಎಲ್ಲ ಬಗೆಯ ಸ್ವಾತಂತ್ರ್ಯ ಎಂದು ತಿಳಿದುಕೊಳ್ಳುವುದು ಆತ್ಮಘಾತುಕವಾದದ್ದು’’ ಎಂಬ ಅಂಬೇಡ್ಕರ್ ವಿಚಾರಧಾರೆ ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ. ನಮ್ಮ ದೇಶದ ಸಂವಿಧಾನದಲ್ಲಿ ದಮನಿತ ಜನವರ್ಗಗಳ ಹಕ್ಕುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಅನುಚ್ಛೇದಗಳು ಬಹುಪಾಲು ಸ್ವತಂತ್ರ ಭಾರತದಲ್ಲಿ ಮೂಲೆಗೆ ತಳ್ಳಲ್ಪಟ್ಟಿರುವ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಣೆ ವಿಶೇಷ ಮಹತ್ವ ಹೊಂದಿದೆ.

ನಮ್ಮ ಸಂವಿಧಾನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಭಾರತ ದೇಶವನ್ನು ಅರ್ಥಮಾಡಿಕೊಳ್ಳದ ಹೊರತು, ಭಾರತದ ಸಂವಿಧಾನ ಅರ್ಥವಾಗುವುದಿಲ್ಲ. ಭಾರತದ ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ, ಅದರ ಮೂಲತತ್ವಗಳು ತಿಳಿಯುವುದಿಲ್ಲ. ಸಂವಿಧಾನದ ಮೂಲತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದು ಅತ್ಯವಶ್ಯಕವೆಂಬ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವಿಚಾರಧಾರೆ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಹಿಂದುತ್ವವೇ ಭಾರತೀಯತೆ ಅಲ್ಲ. ಹಿಂದುತ್ವವೊಂದೇ ಭಾರತೀಯತೆಯೆಂಬುದು ಭಾರತೀಯತೆಯ ಸಂಕುಚಿತ ವ್ಯಾಖ್ಯಾನವಾಗುತ್ತದೆ. ಸಂವಿಧಾನವನ್ನು ಸುಡುವುದೆಂದರೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸೋದರತೆ ಮತ್ತು ಸಮಾನತೆಯ ಸಿದ್ಧಾಂತಗಳನ್ನು ಸುಟ್ಟಂತೆ ಎಂಬುದನ್ನು ತಿಳಿಯಬೇಕು. ಸರ್ವಧರ್ಮ ಸಹಿಷ್ಣುತೆ ಮತ್ತು ಸಮತೆಯು ಸಂವಿಧಾನದ ಆಶಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತೀಯ ಸಂವಿಧಾನವನ್ನು ನಿಯಮ ಮತ್ತು ನೀತಿ ಎರಡು ನೆಲೆಗಳಲ್ಲಿ ಗ್ರಹಿಸಬೇಕು. ಸಂವಿಧಾನವನ್ನು ಬದಲಾಯಿಸುವುದು ಬೇರೆ, ತಿದ್ದುಪಡಿ ಮಾಡುವುದು ಬೇರೆ. 368ನೇ ವಿಧಿಯಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನ ಸಂಸತ್ತಿಗೆ ನೀಡಿದೆ. ಆದರೆ ಸಂವಿಧಾನದ ಮೂಲತತ್ವಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಪ್ರಗತಿಶೀಲ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪಮಂಡಿಸಿರುವ ಅಭಿಪ್ರಾಯ ಅಧಿಕಾರಯುತವಾಗಿದೆ.

ಸಮಾಜವಾದಿಗಳು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳಲ್ಲಿ ಕೇವಲ ನಂಬಿಕೆಯಿಟ್ಟರಷ್ಟೇ ಸಾಲದು. ಅವರು ಭಾರತದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಒಗ್ಗೂಡಿಸಿ ಸಾಂವಿಧಾನಿಕ ಆಶಯಗಳಿಗೆ ಅನುಸಾರವಾಗಿ ಸಮಸಮಾಜವನ್ನು ನಿರ್ಮಿಸಲು ಮುಂದಾಗಬೇಕು. ಪ್ರಜೆಗಳು ತಮ್ಮ ಬದುಕನ್ನು ಸುಧಾರಿಸುವ ವೃತ್ತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರಬೇಕು. ತಳಸಮುದಾಯಗಳಿಗೆ ವಿದ್ಯೆ, ಕೌಶಲ್ಯ, ಉದ್ಯಮಶೀಲತೆ, ನಾಯಕತ್ವ ಗುಣ ಮತ್ತು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸಿದಾಗ ಮಾತ್ರ ಭಾರತದ ಸಂವಿಧಾನಕ್ಕೆ ಮಹತ್ವ ಲಭಿಸುತ್ತದೆ. ರಾಜಕಾರಣದಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈ ಮೇಲಾದಾಗ ಶಾಸಕಾಂಗದಿಂದ ಒಳ್ಳೆಯ ಶಾಸನಗಳು, ಕಾರ್ಯಾಂಗದಿಂದ ಉತ್ತಮ ಕಾರ್ಯಕ್ರಮಗಳು, ನ್ಯಾಯಾಂಗದಿಂದ ರಚನಾತ್ಮಕ ತೀರ್ಪುಗಳು ಮತ್ತು ಸಮಾಜದಿಂದ ಅರ್ಥಪೂರ್ಣ ನಡವಳಿಕೆಗಳು ಲಭಿಸುವುದಿಲ್ಲ. ಇತ್ತೀಚೆಗೆ ಸಂವಿಧಾನವು ಗಂಡಾಂತರದಲ್ಲಿದೆ. ಪ್ರಜಾತಂತ್ರ ಸಂಸ್ಥೆಗಳು ತಮ್ಮ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಗಳನ್ನು ಕಳೆದುಕೊಳ್ಳಲು ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳ ರಾಜಕೀಯ ಏಕಸ್ವಾಮ್ಯ ಮುಖ್ಯ ಕಾರಣವಾಗಿದೆ.

ಇತ್ತೀಚಿನ ನ್ಯಾಯಾಂಗದ ತೀರ್ಪುಗಳು ವಸ್ತುನಿಷ್ಠತೆ ಮತ್ತು ಪ್ರಸ್ತುತತೆಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂವಿಧಾನ ವಿರೋಧಿ ಶಕ್ತಿಗಳ ಹಸ್ತಕ್ಷೇಪದಿಂದಾಗಿ ಭಾರತದಲ್ಲಿ ಕಲ್ಯಾಣ ರಾಜ್ಯದ ಕಲ್ಪನೆ ಕ್ರಮೇಣ ಮಾಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಂವಿಧಾನಿಕ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಿಂದಾಗಿ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಸಮರ್ಪಕವಾಗಿಲ್ಲ. ಇತ್ತೀಚೆಗೆ ಹಿಂದುತ್ವವನ್ನೇ ಭಾರತೀಯತ್ವವೆಂದು ಘೋಷಿಸುವ, ಸಂಸ್ಕೃತವನ್ನು ದೇವಭಾಷೆಯೆಂದು ಬೊಬ್ಬಿಡುವ, ಮನುಸ್ಮತಿಯನ್ನೇ ನಿಜವಾದ ಸಂವಿಧಾನವೆಂದು ಸಮರ್ಥಿಸುವ, ವರ್ಣಾಶ್ರಮ ಧರ್ಮವನ್ನೇ ಪ್ರಕೃತಿ ಧರ್ಮವೆಂದು ಬಿಂಬಿಸುವ, ಅಸಮಾನತೆಯನ್ನೇ ದೇವರ ನಿಯಮವೆಂದು ತಿಳಿಸುವ, ಶೂದ್ರರಿಗೆ ಜ್ಞಾನ ಸಲ್ಲದೆಂದು ವಾದಿಸುವ, ಗುಲಾಮರಿಗೇಕೆ ರಾಜ್ಯಾಧಿಕಾರ ಎಂದು ಪ್ರಶ್ನಿಸುವ, ಶ್ರೀಮಂತರ ಪ್ರಭುತ್ವವೇ ಪ್ರಜಾಪ್ರಭುತ್ವವೆಂದು ತೀರ್ಪು ನೀಡುವ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿರುವುದು ಭಾರತೀಯ ಸಂವಿಧಾನದ ಶ್ರೇಷ್ಠತೆಗೆ ಧಕ್ಕೆಯುಂಟುಮಾಡುತ್ತಿದೆ.

ಹೆಚ್ಚುತ್ತಿರುವ ಬಲಪಂಥೀಯ ರಾಜಕಾರಣ ಸಾಮಾಜಿಕ ಸಮಾನತೆ, ನ್ಯಾಯ, ಸಾಮರಸ್ಯ ಮತ್ತು ಪ್ರಜಾಸತ್ತೆಗಳಿಗೆ ಗಂಭೀರ ಸ್ವರೂಪದ ಧಕ್ಕೆಯುಂಟು ಮಾಡಿದೆ. ಮನುಷ್ಯರ ಬದುಕಿಗೆ ಧಕ್ಕೆಯುಂಟು ಮಾಡುವ ಕೆಲಸಗಳನ್ನು ಜನಪ್ರತಿನಿಧಿಗಳು ಮಾಡುತ್ತಿದ್ದರೆ ಸ್ವತಂತ್ರ ನ್ಯಾಯಾಂಗ ಹಿಂದುತ್ವವಾದಿಗಳಿಂದಾಗಿ ಕ್ರಮೇಣ ಸಂವಿಧಾನದ ಮೂಲ ಆಶಯಗಳಿಂದ ದೂರ ಸರಿಯುತ್ತಿದೆ. ಜಾತಿಪ್ರಭುತ್ವ ನಾಶವಾಗದ ಹೊರತು ನಿಜವಾದ ಪ್ರಜಾಪ್ರಭುತ್ವ ಭಾರತದಲ್ಲಿ ಬಲಗೊಳ್ಳುವುದಿಲ್ಲವೆಂಬ ಚಾರಿತ್ರಿಕ ಸತ್ಯವನ್ನು ಮೌರ್ಯ ಸಾಮ್ರಾಜ್ಯದ ಇತಿಹಾಸದ ಅವಲೋಕನದಿಂದ ಅರಿಯಬೇಕು. ಸರ್ವರಿಗೂ ಸಮಾನತೆ ಮತ್ತು ಶ್ರೇಯಸ್ಸನ್ನೇ ಉಂಟುಮಾಡುವ ಮೌರ್ಯ ಯುಗ ಭಾರತದಲ್ಲಿ ಮತ್ತೊಮ್ಮೆ ರೂಪುಗೊಳ್ಳಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ಕುರಿತಂತೆ ಅಂಬೇಡ್ಕರ್ ವಿಚಾರಧಾರೆಗಳನ್ನು ನಾವಿಂದು ಪುನರ್‌ಮನನ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂವಿಧಾನಾತ್ಮಕ ಸಮಾಜವಾದ ಅನುಷ್ಠಾನಗೊಳ್ಳದ ಹೊರತು ಭಾರತವು ಪ್ರಬುದ್ಧ ದೇಶವಾಗುವುದಿಲ್ಲ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಉಳಿಯಬೇಕಾದರೆ ಸಂವಿಧಾನಾತ್ಮಕ ಆಶಯಗಳ ಪ್ರಾಮಾಣಿಕ ಅನುಷ್ಠಾನ ಅತ್ಯವಶ್ಯಕ. ಇಂತಹ ಸವಾಲಿನ ಸಂದರ್ಭದಲ್ಲಿ ಭಾರತೀಯರು ಯಾವುದೇ ಬೆಲೆಯನ್ನು ತೆತ್ತಾದರೂ ನಮ್ಮ ಸಂವಿಧಾನವನ್ನು ರಕ್ಷಿಸಬೇಕು. ಆಗ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಇಂತಹ ಸತ್ಯದರ್ಶನ ಪ್ರಸ್ತುತ ಸಂದರ್ಭದಲ್ಲಿ ಔಚಿತ್ಯಪೂರ್ಣವಾಗಿದೆ.

Writer - ಡಾ. ಪಿ. ಮಹೇಶ್ ಚಂದ್ರ ಗುರು

contributor

Editor - ಡಾ. ಪಿ. ಮಹೇಶ್ ಚಂದ್ರ ಗುರು

contributor

Similar News