×
Ad

ಇ-ಸಮೀಕ್ಷೆ ನಡೆಸಲು ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಆಶಾ ಕಾರ್ಯಕರ್ತೆಯರಿಂದ ಬೃಹತ್ ಧರಣಿ

Update: 2021-03-15 23:44 IST

ಬೆಂಗಳೂರು, ಮಾ.15: ರಾಜ್ಯ ಸರಕಾರ ಇ-ಸಮೀಕ್ಷೆ ಸಂಬಂಧ ಮೊಬೈಲ್, ಟ್ಯಾಬ್ ಜೊತೆಗೆ ಉಚಿತ ಡಾಟಾ ಸೇವೆ ಒದಗಿಸಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಹೋರಾಟಗಾರರು, ಸರಕಾರ ಈ ಕೂಡಲೇ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಮುಖ್ಯವಾಗಿ ಪ್ರಸಕ್ತ ಈ-ಸಮೀಕ್ಷೆ ನಡೆಸಲು ಮೊಬೈಲ್, ಟ್ಯಾಬ್ ಜೊತೆ ಡಾಟಾ ಒದಗಿಸಬೇಕು. ಅದೇ ರೀತಿ, ಯಾರಿಗೆ ತಂತ್ರಜ್ಞಾನ ಬಳಸಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಟಿ.ಸಿ.ರಮಾ, ಆಶಾ ಕಾರ್ಯಕರ್ತೆಯರು ಈಗಾಗಲೇ ಕೊರೋನ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ, ಅಲ್ಲದೇ ಹಗಲು ರಾತ್ರಿಯ ಚಿಂತೆಯಿಲ್ಲದೇ, ಜನರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತು ದಣಿಯುತ್ತಿದ್ದಾರೆ. ಇದರ ಮೇಲೆ ಇವರಿಗೆ ಸರಣಿ ಸಮೀಕ್ಷೆಗಳನ್ನು ಆದೇಶಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಸಮೀಕ್ಷೆಯ ಉದ್ದೇಶ, ಇವರು ಕೇಳುವ ಪ್ರಶ್ನೆಗಳಿಗೆ ಆಧಾರ ಅಥವಾ ಕಾರಣಗಳನ್ನು ಆಶಾಗಳಿಗೆ ನಿರ್ದೇಶಿಸಿರುವುದಿಲ್ಲ, ಅಲ್ಲದೇ ಈ ಸಮೀಕ್ಷೆಗೆ ಕನಿಷ್ಠ ಸಂಭಾವನೆಯೂ ನಿಗದಿ ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಪಿ.ಎಸ್.ಶಣ್ಮುಗಂ ಮಾತನಾಡಿ, ಬೆಲೆ ಏರಿಕೆಯಿಂದ ಹಲವಾರು ದಿನಗೂಲಿ ನೌಕರರು ಜನಸಮಾನ್ಯರು ಕೆಲಸ ಕಳೆದುಕೊಂಡಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಜನರು ತತ್ತರಿಸುತ್ತಿದ್ದಾರೆ.

ಆದರೆ, ಒಂದೆಡೆ ಶ್ರೀಮಂತ ಬಂಡವಾಳಶಾಹಿಗಳಿಗೆ ಸಾಲ ಮನ್ನಾ ಮಾಡುತ್ತಾ, ಖಾಸಗೀಕರಣ ನೀತಿಗಳ ಮೂಲಕ ಅವರಿಗೆ ಸವಲತ್ತುಗಳನ್ನು ಕೊಡುತ್ತಿದ್ದಾರೆ. ಇನ್ನೊಂದೆಡೆ ಬಡ ಜನರ ರಕ್ತ ಹೀರುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪದೇ ಪದೇ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ಇಳಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯವಾದ್ದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News