×
Ad

ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳ ಧರಣಿ

Update: 2021-03-15 23:46 IST

ಬೆಂಗಳೂರು, ಮಾ.15: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿ ಗಾಳಿಗೆ ತೂರಿ ಪಿಎಚ್‍ಡಿ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಇದಕ್ಕೆ ನೇರವಾಗಿ ಬೆಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಕಾರಣವೆಂದು ಆರೋಪಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು.

ಸೋಮವಾರ ಇಲ್ಲಿನ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿವಿ ಕುಲಪತಿಗಳ ಕಚೇರಿ ಮುಂಭಾಗ ಜಮಾಯಿಸಿದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಧರಣಿ ನಿರತ ವಿದ್ಯಾರ್ಥಿಗಳು, ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಪ್ರವೇಶ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ ಶೇ.55, ಹಿಂದುಳಿದ ವರ್ಗಗಳಿಗೆ ಶೇ.50 ಮತ್ತು ಪರಿಶಿಷ್ಟಜಾತಿ ಹಾಗೂ ವರ್ಗಗಳಿಗೆ ಶೇ.45ರಷ್ಟು ಅರ್ಹತಾ ಅಂಕಗಳನ್ನು ನಿಗದಿಪಡಿಸಬೇಕು. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಯಾವುದೇ ವಿನಾಯಿತಿ ನೀಡದೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದರು.

ಅದೇರೀತಿ, ನಿವೃತ್ತಿಗೆ 6 ತಿಂಗಳು ಬಾಕಿ ಇರುವ ಪ್ರಾಧ್ಯಾಪಕರಿಗೆ ಪಿಎಚ್‍ಡಿ ಮಾರ್ಗದರ್ಶನ ನೀಡಲು ಪ್ರೊ.ಕೆ.ಆರ್.ವೇಣುಗೋಪಾಲ್ ಅವರು ಅವಕಾಶ ನಿರಾಕರಿಸುತ್ತಿದ್ದಾರೆ. ಇದರಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಿಎಚ್‍ಡಿ ಕನಸು ಮಣ್ಣುಪಾಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News