×
Ad

ಖಾಸಗೀಕರಣಗೊಳಿಸದಂತೆ ನಿರ್ಣಯ ಕೈಗೊಳ್ಳಲು ಕಾರ್ಮಿಕರ ಒಕ್ಕೊರಲಿನ ಆಗ್ರಹ

Update: 2021-03-16 23:02 IST

ಬೆಂಗಳೂರು, ಮಾ.16: ಕರ್ನಾಟಕ ರಾಜ್ಯದಲ್ಲಿರುವ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸದಂತೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮಂಗಳವಾರ ಖಾಸಗೀಕರಣ ವಿರೋಧಿ ವೇದಿಕೆ ನೇತೃತ್ವದಲ್ಲಿ ನಗರದ ರೈಲ್ವೇ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ಬೆಮೆಲ್, ಬಿಎಸ್‍ಎನ್‍ಎಲ್, ಕೆಪಿಟಿಸಿಎಲ್, ಎಚ್‍ಎಎಲ್ ಸೇರಿದಂತೆ ಇನ್ನಿತರೆ ಸರಕಾರಿ ಕಂಪೆನಿಗಳನ್ನು ಖಾಸಗೀಕರಣ ಮಾಡಬಾರದೆಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಖಾಸಗೀಕರಣ ವಿರೋಧಿ ವೇದಿಕೆಯ ಪ್ರಧಾನ ಸಂಚಾಲಕಿ ಎಸ್.ವರಲಕ್ಷ್ಮೀ, ಕೇಂದ್ರ ಸರಕಾರವು ಅತ್ಯಂತ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್, ವಿಮೆ, ರಕ್ಷಣೆ, ರೈಲ್ವೇ ಸೇರಿದಂತೆ ನೂರಾರು ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಖಾಸಗೀಕರಣದಿಂದ ಖಾಸಗಿಯವರ ಕೈಯಲ್ಲಿ ಆರ್ಥಿಕ ಮತ್ತು ಅಧಿಕಾರದ ಕೇಂದ್ರೀಕರಣವಾಗುತ್ತದೆ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಆದಾಯ ಮತ್ತು ಸಂಪತ್ತಿನಲ್ಲಿ ಅಸಮಾನತೆಗಳು ಹೆಚ್ಚುತ್ತವೆ. ಸಂಪನ್ಮೂಲಗಳ ಹಂಚಿಕೆಯ ಅಸಮಾನತೆಯಿಂದ ಕಲ್ಯಾಣ ಕಾರ್ಯಕ್ರಮಗಳು ಕುಸಿಯುತ್ತವೆ. ಈಗಾಗಲೇ ಪಿಎಸ್‍ಯುಗಳಲ್ಲಿ ಕೆಲಸ ಮಾಡುತ್ತಿರುವ 27 ಲಕ್ಷ ಜನರಲ್ಲಿ ಶೇ.25ರಷ್ಟು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಈ ಎಲ್ಲಾ ರೀತಿಯ ಅಪಾಯಗಳನ್ನು ತಡೆಗಟ್ಟಲು ಖಾಸಗೀಕರಣವನ್ನು ತಡೆಯುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕರಾದ ಮೀನಾಕ್ಷಿ ಸುಂದರಂ, ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಎಚ್.ವಿ.ಸುದರ್ಶನ್, ರತ್ನಾಕರ್ ಶೆಣೈ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News