ಬೈಕ್ ಗೆ ಲಾರಿ ಢಿಕ್ಕಿ: 3 ವರ್ಷದ ಮಗು ಮೃತ್ಯು
Update: 2021-03-18 22:43 IST
ಬೆಂಗಳೂರು, ಮಾ.18: ಬೈಕ್‍ವೊಂದಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಇಲ್ಲಿನ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾಸನಪುರದ ಶ್ರೀನಿವಾಸಮೂರ್ತಿ ಹಾಗೂ ಕಲಾವತಿ ದಂಪತಿ ಬೈಕ್‍ನಲ್ಲಿದ್ದು, ಅವರ ಪುತ್ರಿ ಶ್ರಾವಣಿ(3) ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ನೆಲಮಂಗಲದ ಹುರುಳಿಹಳ್ಳಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಲಾರಿ-ಬೈಕ್ ಢಿಕ್ಕಿಯಾದಾಗ ಮೂರು ವರ್ಷದ ಶ್ರಾವಣಿ ಬೈಕ್‍ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಅವಳ ಮೇಲೆ ಲಾರಿ ಸಾಗಿಹೋಗಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಅಪಘಾತದಲ್ಲಿ ಶ್ರೀನಿವಾಸಮೂರ್ತಿ ಹಾಗೂ ಕಲಾವತಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ನೆಲಮಂಗಲ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.